ಮಂಗಳೂರು : ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್–ಯುಜಿ) 720ಕ್ಕೆ 720 ಅಂಕ ಪಡೆಯುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅರ್ಜುನ್, ನೀಟ್‌ನಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆ, ಆದರೆ, ಪ್ರಥಮ ರ್‍ಯಾಂಕ್ ನಿರೀಕ್ಷಿಸಿರಲಿಲ್ಲ. ದೆಹಲಿಯ ಏಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಓದುವುದು ನನ್ನ ಕನಸಾಗಿತ್ತು. ಕಾಲೇಜು ವೇಳಾಪಟ್ಟಿಯನ್ನು ಚಾಚೂತಪ್ಪದೆ ಅನುಸರಿಸುತ್ತಿದ್ದೆ. ಯಾವುದೇ ಅನುಮಾನ ಇದ್ದರೂ ಉಪನ್ಯಾಸಕರು ಪರಿಹರಿಸುತ್ತಿದ್ದರು. ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯ ಓದು ಗುರಿ ಸಾಧನೆಗೆ ಸಹಕಾರಿಯಾಯಿತು ಎಂದರು.
ಅರ್ಜುನ್ ತಂದೆ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಫಾರ್ಮಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಿಶೋರ್ ಮತ್ತು ಸ್ತ್ರೀರೋಗ ತಜ್ಞೆ ಡಾ. ರಶ್ಮಿ ಅವರ ಪುತ್ರ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 99.8 ಅಂಕಗಳನ್ನು ಅರ್ಜುನ್ ಗಳಿಸಿದ್ದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರೊ. ನರೇಂದ್ರ ಎಲ್. ನಾಯಕ್ ಪ್ರತಿಕ್ರಿಯಿಸಿ ಕಠಿಣ ಪರಿಶ್ರಮವೇ ಯಶಸ್ಸು ಎಂಬುದು ಎಕ್ಸ್‌ಪರ್ಟ್ ಕಾಲೇಜಿನ ಧ್ಯೇಯವಾಕ್ಯವಾಗಿದ್ದು, ಪರಿಶ್ರಮವಿದ್ದರೆ ಯಶಸ್ಸು ಖಂಡಿತ ಸಿಗುತ್ತದೆ. ವಿದ್ಯಾರ್ಥಿಯ ಶ್ರಮ, ಪಾಲಕರು, ಉಪನ್ಯಾಸಕರು, ಕಾಲೇಜಿನ ವಾತಾವರಣದಿಂದ ಇದು ಸಾಧ್ಯವಾಗಿದೆ ಎಂದರು.