ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಾರಂಭವಾದ ಬಳಿಕ ಈಗಾಗಲೇ 9 ಸಾವು ಸಂಭವಿಸಿದ್ದು, ಇಂದು ಮತ್ತೊಂದು ಸಾವು ಸಂಭವಿಸಿದೆ.
ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಮೃತಪಟ್ಟಿರುವ ಘಟನೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸಿಎ ಅಭ್ಯಾಸ ಮಾಡುತ್ತಿದ್ದ ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿ ಆಶ್ನಿ ಶೆಟ್ಟಿ (20) ಮೃತಪಟ್ಟವರು.
ಹರೀಶ್ ಅವರು ಮನೆಯಲ್ಲಿ ಸಣ್ಣ ಪ್ರಮಾಣದ ಹೈನುಗಾರಿಕೆ ನಡೆಸುತ್ತಿದ್ದು ಎಂದಿನಂತೆ ಶುಕ್ರವಾರ ಬೆಳಿಗ್ಗೆ ದನ ಮೇಯಿಸಲು ತೆರಳಿದ್ದರು. ಈ ವೇಳೆ ಅವರೊಂದಿಗೆ ಮನೆಯ ನಾಯಿಯೂ ತೆರಳಿತ್ತು.
ತಂದೆಯೊಂದಿಗೆ ತೆರಳಿದ್ದ ನಾಯಿಯನ್ನು ಕರೆತರಲು ಆಶ್ನಿ ಶೆಟ್ಟಿ ತೆರಳಿದ್ದರು. ನಾಯಿ ಗದ್ದೆಯಲ್ಲಿದ್ದ ನೀರಿಗೆ ತೆರಳಿರುವುದನ್ನು ಕಂಡ ಆಶ್ನಿ ನಾಯಿಯನ್ನು ಹಿಡಿಯಲು ನೀರಿಗೆ ಇಳಿದಾಗ ವಿದ್ಯುತ್ ಆಘಾತ ಸಂಭವಿಸಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗದ್ದೆಯಲ್ಲಿದ್ದ ವಿದ್ಯುತ್ ಕಂಬದಿಂದ ತಂತಿಯೊಂದು ತುಂಡಾಗಿ ಗದ್ದೆಗೆ ಬಿದ್ದಿತ್ತು. ಇದರಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ನೀರಿನಲ್ಲಿ ವಿದ್ಯುತ್ ಹರಿದು ಈ ದುರ್ಘಟನೆ ಸಂಭವಿಸಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಮೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸಿದ ಬಳಿಕ ನಾಯಿ ಮತ್ತು ಆಶ್ನಿಯ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.