ಉಳ್ಳಾಲ : ಇಲ್ಲಿನ ಸೋಮೇಶ್ವರ ಉಚ್ಚಿಲ ಬಳಿಯ ಸಮುದ್ರ ತೀರದ ಪಾಳುಬಾವಿಯ ಕಟ್ಟೆಯಲ್ಲಿ ಸ್ನೇಹಿತನೊಂದಿಗೆ ಹರಟೆ ಹೊಡೆಯುತ್ತಿದ್ದ ವೃದ್ಧ ಮೀನುಗಾರರೊಬ್ಬರು ಆಯತಪ್ಪಿ ಬಾವಿಯೊಳಗಡೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಉಚ್ಚಿಲ ವಾಝ್ಕೊ ರೆಸಾರ್ಟ್ ಬಳಿಯ ನಿವಾಸಿ ಶಶೀಂದ್ರ ಎಂ. ಉಚ್ಚಿಲ್ (75)ಮೃತಪಟ್ಟ ಮೀನುಗಾರ.
ಶಶೀಂದ್ರ ಎಂ. ಉಚ್ಚಿಲ್ ಅವರು ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದಾರೆ. ಮಂಗಳವಾರ ಸಂಜೆ ಸ್ನೇಹಿತನೊಂದಿಗೆ ವಾಝ್ಕೋ ರೆಸಾರ್ಟ್ ಮುಂಭಾಗದ ಪಾಳುಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಹರಟುತ್ತಿದ್ದರು. ಈ ವೇಳೆ ಶಶೀಂದ್ರ ಅವರು ಆಯತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಮೀನುಗಾರರಾಗಿ ನುರಿತ ಈಜುಗಾರರಾದ ಶಶೀಂದ್ರು ತಲೆಕೆಳಗಾಗಿ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ಕೇವಲ ಮೂರು ಅಡಿಯಷ್ಟು ನೀರಿದ್ದ ಪರಿಣಾಮ ತಲೆಗೆ ನೆಲ ಬಡಿದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ತಕ್ಷಣ ಸ್ಥಳೀಯರೆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಶಶೀಂದ್ರ ಅವರ ಪತ್ನಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದು ಬುಧವಾರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸುವ ತಯಾರಿ ನಡೆದಿತ್ತು.