ಮಂಗಳೂರು : ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಪ್ಯಾನ್ ಇಂಡಿಯಾದಲ್ಲಿ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

‘ಕಾಂತಾರʼ ದೈವ ಹಾಗೂ ತುಳುನಾಡಿನ ಕಥೆಯನ್ನು ಒಳಗೊಂಡಿದೆ. ‘ಕಾಂತಾರ ಚಾಪ್ಟರ್ -1’ ಚಿತ್ರೀಕರಣ ಶುರುವಾಗಿ ಕೆಲ ತಿಂಗಳು ಕಳೆದಿದೆ. ಆದರೆ ಚಿತ್ರೀಕರಣ ಸಂದರ್ಭದಲ್ಲಿ ಒಂದಲ್ಲ ಒಂದು ವಿಘ್ನಗಳು ‘ಕಾಂತಾರ’ಕ್ಕೆ ಎದುರಾಗಿದೆ.
ಮಂಗಳೂರಿನ ಕದ್ರಿ ಬಾರೆಬೈಲ್‌ನಲ್ಲಿ ನಡೆದ ವಾರ್ಷಿಕ ದೈವದ ನೇಮದಲ್ಲಿ ರಿಷಬ್ ದಂಪತಿ ಸಹಿತ ಭಾಗಿಯಾಗಿದ್ದು, ಈ ವೇಳೆ ತನಗೆ ಉಂಟಾಗಿರುವ ಸವಾಲು – ಸಂಕಷ್ಟಗಳ ಬಗ್ಗೆ ದೈವದ ಬಳಿ ಕೇಳಿಕೊಂಡಿದ್ದಾರೆ.
ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ರಿಷಬ್ ಶೆಟ್ಟಿ ಕಷ್ಟವನ್ನು ಹೇಳಿಕೊಂಡಿದ್ದು, ಇದಕ್ಕೆ ದೈವ ರಿಷಬ್ ಅವರನ್ನು ಎಚ್ಚರಿಸಿ ಅಭಯವನ್ನು ನೀಡಿದೆ.
‘ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನೀನು ನಂಬಿದ ದೈವ ಕೈಬಿಡಲ್ಲ’ ಎಂದು ಅಭಯವನ್ನು ನೀಡಿದೆ.
‘ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ಆದರೆ ಕೇಡು ಆಗದಂತೆ ನೋಡಿಕೊಳ್ತೇನೆ. ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ’ ಎಂದು ಅಭಯ ನೀಡಿದೆ.
‘ಕಾಂತಾರ’ ಚಿತ್ರದ ಚಿತ್ರೀಕರಣ ಆರಂಭವಾದ ಸಂದರ್ಭದಿಂದ ಇದುವರೆಗೆ ಹಲವು ಸವಾಲನ್ನು ಎದುರಿಸಿದೆ.
ಜೂನಿಯನ್ ಆರ್ಟಿಸ್ಟ್‌ಗಳಿದ್ದ ವಾಹನ ಪಲ್ಟಿಯಾಗಿತ್ತು. ಇದಲ್ಲದೆ ಅರಣ್ಯದಲ್ಲಿ ಸ್ಫೋಟಕವನ್ನು ಬಳಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.
ಈ ಎಲ್ಲ ಸವಾಲು – ಸಂಕಷ್ಟಗಳನ್ನು ಎದುರಿಸಿಕೊಂಡು ಚಿತ್ರತಂಡ ಬಹುತೇಕ ಚಿತ್ರೀಕರಣವನ್ನು ಮುಗಿಸಿದ್ದು, ಇದೇ ಅಕ್ಟೋಬರ್ 2 ರಂದು ಚಿತ್ರವನ್ನು ರಿಲೀಸ್ ಮಾಡಲು ನಿರ್ಧರಿಸಿದೆ.