ಉಡುಪಿ : ಜಿಲ್ಲೆಯಲ್ಲಿ ಅಕ್ರಮವಾಗಿ ಹೋಂಸ್ಟೇ, ರೆಸಾರ್ಟ್ ನಡೆಸುತ್ತಿರುವವರು ಒಂದು ತಿಂಗಳೊಳಗೆ ಸಕ್ರಮ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್ ಮಾಲಕರ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 200 ಹೋಂ ಸ್ಟೇಗಳು ಅಧಿಕೃತವಾಗಿ ನಡೆಯುತ್ತಿವೆ. ಅನಧಿಕೃತ ಹೋಂಸ್ಟೇಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಒಂದು ವರ್ಷದಿಂದ ಸಕ್ರಮಕ್ಕೆ ಸೂಚನೆ ನೀಡುತ್ತಿದ್ದರೂ ನಿರ್ಲಕ್ಷಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಸಕ್ರಮ ಮಾಡಿಕೊಳ್ಳದಿದ್ದರೆ ಕ್ರಮ ಅನಿವಾರ್ಯ. ಜೊತೆಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿಲ್ಲ ಎಂದು ಜಿಲ್ಲಾಡಳಿತಕ್ಕೆ ಮುಚ್ಚಳಿಕೆ ಬರೆದುಕೊಡಬೇಕು ಎಂದರು.
ಸರಕಾರಿ ಭೂಮಿ ಹಾಗೂ ಸಿಆಝಡ್ ವ್ಯಾಪ್ತಿಯಲ್ಲಿ ಹೋಂಸ್ಟೇ ಕಟ್ಟಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಅಕ್ರಮವಾಗಿ ಕಟ್ಟಿದ್ದರೆ ಕೂಡಲೇ ತೆರವು ಮಾಡಬೇಕು. ಇಲ್ಲವಾದರೆ ತೆರವು ಮಾಡಿಸಲಾಗುವುದು. ಹೋಂ ಸ್ಟೇಗಳಲ್ಲಿ ಮಾಲಕರು ಇರುವುದು ಕಡ್ಡಾಯ. ಒಂದೊಮ್ಮೆ ಮಾಲಕರು ಇಲ್ಲದೇ ಇದ್ದರೆ ಈಗ ಕೇಂದ್ರ ಸರಕಾರ ರೂಪಿಸಿರುವ ಬ್ರೆಡ್ ಆ್ಯಂಡ್ ಬ್ರೇಕ್‌ಫಾಸ್ಟ್ ಯೋಜನೆ (ಬಿಆ್ಯಂಡ್‌ಬಿ)ಯಡಿ ನೋಂದಣಿ ಮಾಡಬೇಕು ಎಂದರು. ಹೋಂಸ್ಟೇಗಳಿಗೆ ಬರುವ ಪ್ರವಾಸಿಗರನ್ನು ದಟ್ಟಾರಣ್ಯ, ನದಿ, ಬೀಚ್‌ಗಳಿಗೆ ರಾತ್ರಿ ವೇಳೆ ಕರೆದುಕೊಂಡು ಹೋಗಿ ಪಾರ್ಟಿ ಆಯೋ ಜನೆ ಮಾಡುವಂತಿಲ್ಲ. ನಡುರಾತ್ರಿ ಡಿಜೆ ಹಾಕಿ ಅಕ್ಕಪಕ್ಕದವರಿಗೆ ಸಮಸ್ಯೆ ನೀಡಬಾರದು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ.ಮತ್ತಿತರರು ಉಪಸ್ಥಿತರಿದ್ದರು.