ಉಡುಪಿ : ಉಡುಪಿ ಜಿಲ್ಲೆಯ ವೃದ್ಧಾಶ್ರಮಗಳಲ್ಲಿ ಸುಮಾರು 15 ವರ್ಷಗಳನ್ನು ಕಳೆದ ಮಂಜುಳಾ ಎಂಬ ಮಹಿಳೆ ಅಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯಿಂದ ಪೂರ್ಣ ಗುಣಮುಖರಾಗಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಕುಡಾಲ್‌ನ ತನ್ನ ಮನೆಗೆ ಕಳೆದ ತಿಂಗಳು ಮರಳಿದ್ದಾರೆ.
ಮಂಜುಳಾ 2019ರ ಮಾರ್ಚ್ 29ರಂದು ಶಂಕರಪುರದಲ್ಲಿರುವ ವಿಶ್ವಾಸದ ಮನೆ ಕರುಣಾಲಯ ವೃದ್ಧಾಶ್ರಮಕ್ಕೆ ದಾಖಲಾಗಿದ್ದರು. ಇದಕ್ಕೆ ಮುನ್ನ ಉಡುಪಿಯ ಒಂದು ಖಾಸಗಿ ವೃದ್ಧಾಶ್ರಮದಲ್ಲಿದ್ದ ಆಕೆ ಅದು ಮುಚ್ಚಲ್ಪಟ್ಟ ಕಾರಣ ಅಲ್ಲಿಯ ವೃದ್ಧರನ್ನು ಹಾಗೂ ನಿರ್ಗತಿಕರನ್ನು ವಿಶ್ವಾಸದ ಮನೆ ಆಶ್ರಮಕ್ಕೆ ಸ್ಥಳಾಂತರಿಸಲು ಉಡುಪಿಯ ಆಗಿನ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
ಜಿಲ್ಲಾಧಿಕಾರಿಗಳ ಆದೇಶಕ್ಕೆ ಸ್ಪಂದಿಸಿದ ವಿಶ್ವಾಸದ ಮನೆಯ ವಂ. ಸುನಿಲ್ ಜಾನ್ ಡಿಸೋಜಾ ಅವರು 2019ರ ಮಾರ್ಚ್ 29ರಂದು ಅಲ್ಲಿದ್ದ 30 ಮಂದಿ ವೃದ್ಧರನ್ನು ವಿಶ್ವಾಸದ ಮನೆಗೆ ದಾಖಲಿಸಿಕೊಂಡಿದ್ದರು. ಈ 30 ಮಂದಿಯಲ್ಲಿ ಮಂಜುಳಾ ಸಹ ಒಬ್ಬರಾಗಿದ್ದರು.
ಮಂಜುಳ ಮಾನಸಿಕ ಅಸ್ವಸ್ಥೆಯಾಗಿದ್ದರೂ ಆಶ್ರಮದಲ್ಲಿ ಅಲ್ಪಸ್ವಲ್ಪ ಕೆಲಸವನ್ನು ಮಾಡುತ್ತಿದ್ದರು. ದಿನ ಕಳೆದಂತೆ ಸಿಬ್ಬಂದಿಗಳ ಆರೈಕೆ ಮತ್ತು ವೈದ್ಯಕೀಯ ಚಿಕಿತ್ಸೆಯ ಮೂಲಕ ಇವರು ನಿಧಾನವಾಗಿ ಗುಣಮುಖರಾಗುತ್ತಾ ಬಂದರು. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಮಾಜ ಸೇವಕಿಯರೊಂದಿಗೆ ಆಪ್ತಸಮಾಲೋಚನೆ ಮಾಡಿದಾಗ ಊರಿನ ವಿಳಾಸವನ್ನು ಸರಿಯಾಗಿ ಇಲ್ಲದಿದ್ದರೂ ಅಲ್ಪ ಸ್ವಲ್ಪ ತಿಳಿಸಿದರು.
ಮಂಜುಳಾ ನೀಡಿದ ಮಾಹಿತಿಯಂತೆ ಅಲ್ಲಿನ ಪೊಲೀಸ್ ಠಾಣೆಗೆ ಆಶ್ರಮದವರು ಕರೆ ಮಾಡಿ ಇವರ ಬಗ್ಗೆ ತಿಳಿಸಿದಾಗ, ಮಂಜುಳಾ 2009ರಿಂದ ನಾಪತ್ತೆಯಾಗಿದ್ದಾರೆ ಎಂದು ಪೋಲಿಸರು ತಿಳಿಸಿದರು. ಇವರ ಬಗ್ಗೆ ಅಲ್ಲಿನ ಪೋಲಿಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲಿ ಮಂಜುಳಾ ಅವರ ವಿಳಾಸ ಪತ್ತೆ ಹಚ್ಚಿದ ಒಂದೇ ವಾರದೊಳಗೆ ಇವರ ಅಣ್ಣನಾದ ಗಣಪತ್ ರಘುವೀರ್ ಪಾಟಕ್, ಇವರ ಮಾವನ ಮಗ ಹಾಗೂ ಇಬ್ಬರು ಪೋಲಿಸರು ಮಹರಾಷ್ಟ್ರದ ಸಿಂಧುದುರ್ಗದ ಕುಡಾಲ್ ಪೋಲಿಸ್ ಠಾಣೆಯಿಂದ ಮಂಜುಳಾರನ್ನು ಕರೆದುಕೊಂಡು ಹೋಗಲು ವಿಶ್ವಾಸದ ಮನೆಗೆ ಆಗಮಿಸಿದರು.
ಅವರು ತಿಳಿಸಿದ ಪ್ರಕಾರ ಇವರ ಹೆಸರು ಮಂಗಳ. ಊರು ಮಹಾರಾಷ್ಟ್ರದ ಕುಡಾಲ್‌ನವರಾಗಿದ್ದಾರೆ. ಇವರ ತಂದೆ ತಾಯಿ ಮರಣಹೊಂದಿದ್ದಾರೆ. ಮದುವೆಯಾದ ಸ್ವಲ್ಪ ಸಮಯದ ಬಳಿಕ ಗಂಡ ಸಹ ಮರಣಹೊಂದಿದ್ದರು. ಇವರಿಗೆ ಮಕ್ಕಳಿಲ್ಲ. ಮಂಗಳಾ 15 ವರ್ಷಗಳ ಬಳಿಕ ಮನೆಗೆ ಹಿಂದಿರುಗುತಿದ್ದಾರೆ ಎಂದು ಅವರ ಅಣ್ಣ ತಿಳಿಸಿದರು. ಮಂಜುಳಾ (ಮಂಗಳ) ಇವರನ್ನು ಕರೆದುಕೊಂಡು ಅಣ್ಣ ಹಾಗೂ ಪೋಲಿಸರು ಕಳೆದ ತಿಂಗಳು ಮಹಾರಾಷ್ಟ್ರಕ್ಕೆ ತೆರಳಿದರು.
ನಿರ್ಗತಿಕರು ಹಾಗೂ ಅನಾಥರಿಗೆ ಆಶ್ರಯತಾಣವಾಗಿರುವ ವಿಶ್ವಾಸದ ಮನೆ ಅನಾಥಾಶ್ರಮ ದಿಕ್ಕುದೆಸೆ ಇಲ್ಲದೆ ಅಲೆದಾಡುತ್ತಿರುವ ಅದೆಷ್ಟೋ ಜನರಿಗೆ ಇಂದಿಗೂ ಆಶಾಕಿರಣವಾಗಿದೆ. ತಮ್ಮ ಮನೆಯವರಿಂದ ದೂರಾಗಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಈ ಜೀವಗಳಿಗೆ ವಿಶ್ವಾಸದಮನೆ ನೆರಳಾಗಿ, ಆಸರೆಯಾಗಿ ಕೊನೆಗೆ ಅವರನ್ನು ಮನೆಯವರ ಜೊತೆ ಸೇರಿಸುವ ಕಾರ್ಯದಲ್ಲಿ ನಿರತವಾಗಿದೆ. ಇಲ್ಲಿನ ಸಿಬ್ಬಂದಿಗಳ ಆರೈಕೆ, ದೊರೆಯುವ ಚಿಕಿತ್ಸೆಯಿಂದ ಚೇತರಿಸಿಕೊಂಡು ಇವರೆಲ್ಲ ಗುಣಮುಖರಾಗಿ ಮನೆ ಸೇರುವುದೇ ನಮಗೆ ಸಂತಸ ನೀಡುತ್ತದೆ ಎಂದು ಪಾಸ್ಟರ್ ಸುನಿಲ್ ಜಾನ್ ಡಿಸೋಜ ತಿಳಿಸಿದರು. ಈ ನಿಟ್ಟಿನಲ್ಲಿ ಮುಂದೆಯೂ ಎಲ್ಲರ ಸಹಕಾರ ಅಗತ್ಯವಿದೆ. ಇಂಥ ಜೀವಗಳಿಗೆ ಆಸರೆಯಾಗಲು ಎಲ್ಲರೂ ಕೈಜೋಡಿಸುವಂತೆ ಅವರು ಮನವಿ ಮಾಡಿದರು.