ಉಡುಪಿ : ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಆಸ್ಪತ್ರೆಯ ಬೃಹತ್ ತಳಪಾಯ ಹೊಂಡದಲ್ಲಿ ನೀರು ತುಂಬಿದ್ದು ಈ ಹೊಂಡ ಮುಚ್ಚುವಂತೆ ಆಗ್ರಹಿಸಿ ಇಂದು ವಿಶಿಷ್ಟ ಮತ್ತು ಅಪಾಯಕಾರಿ ಪ್ರತಿಭಟನೆ ನಡೆಯಿತು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಕ್ರೇನ್ ಮೂಲಕ ಬೃಹತ್ ಹೊಂಡಕ್ಕೆ ತೆರಳಿ ನೀರಿನಲ್ಲಿ ನಗರಸಭೆಗೆ ಎಚ್ಚರಿಕೆ ಸಂದೇಶವುಳ್ಳ ಜಾಗೃತಿ ಫಲಕವನ್ನು ತೇಲಿಬಿಟ್ಟರು.
ಈ ಆಸ್ಪತ್ರೆ ತಳಪಾಯದ ಹೊಂಡವನ್ನು ಏಳೆಂಟು ವರ್ಷಗಳ ಹಿಂದೆ ಅಗೆಯಲಾಗಿದ್ದು ಪ್ರತಿ ಮಳೆಗಾಲಕ್ಕೆ ಇದರಲ್ಲಿ ನೀರು ತುಂಬುತ್ತದೆ. ನಗರಕ್ಕೆ ಇದು ಅಪಾಯದ ಜೊತೆಗೆ ಸಾಂಕ್ರಾಮಿಕ ರೋಗಗಳ ತಾಣವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಹೊಂಡವನ್ನು ಮುಚ್ಚಬೇಕು ಎಂದು ಆಗ್ರಹಿಸಿ ಕ್ರೇನ್ ಮೂಲಕ ನೀರಿಗೆ ಇಳಿದು ಎಚ್ಚರಿಕೆ ಫಲಕವನ್ನು ನೀರಲ್ಲಿ ತೇಲಿ ಬಿಡಲಾಯಿತು.
ಬಳಿಕ ಮಾತನಾಡಿದ ಪ್ರತಿಭಟನಕಾರ ನಿತ್ಯಾನಂದ ಅವರು, 10 ದಿನಗಳ ಒಳಗೆ ಈ ಬೃಹತ್ ಹೊಂಡವನ್ನು ಮುಚ್ಚಿಸಬೇಕು. ಇದೊಂದು ನಗರದ ಸಾಂಕ್ರಾಮಿಕ ರೋಗಗಳ ತಾಣ. ತ್ಯಾಜ್ಯಗಳ ಜೊತೆಗೆ ಈ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ ಸಹಿತ ಮಾರಕ ರೋಗಗಳು ಇಲ್ಲಿಂದಲೇ ಹರಡುತ್ತವೆ. ನಗರಸಭೆ ಎದುರೇ ಇರುವ ಈ ಬೃಹತ್ ಹೊಂಡವನ್ನು ಮುಚ್ಚಬೇಕು ಎಂದು ಆಗ್ರಹಿಸಿದರು. ಇವರಿಗೆ ಸಾಮಾಜಿಕ ಹೋರಾಟಗಾರ ವೈದ್ಯ ಡಾ. ಪಿವಿ ಭಂಡಾರಿ ಕೂಡ ಸಾಥ್ ನೀಡಿದರು.