ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿದ ಆಲ್ಟೋ ಕಾರೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ತಂದೆ-ಮಗ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದುರಂತವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪರ್ಲಡ್ಕದ ಮಾಣಿ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ಸುಳ್ಯ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ್, ಅವರ ಪುತ್ರ ಚಿದಾನಂದ ಹಾಗೂ ಪಕ್ಕದ ಮನೆಯ ರಮೇಶ್ ನಾಯ್ಕ್ ಮೃತಪಟ್ಟ ದುರ್ದೈವಿಗಳು.
ಕಾರಿನಲ್ಲಿದ್ದವರು ಬುಳೇರಿಕಟ್ಟೆಗೆ ಅಡುಗೆ ಕೆಲಸಕ್ಕೆ ಹೋಗಿದ್ದರು. ಬುಳೇರಿ ಕಟ್ಟೆಯಿಂದ ವಾಪಸ್ಸು ಸುಳ್ಯ ತಾಲೂಕಿನ ಜಟ್ಟಿಪಳ್ಳಕ್ಕೆ ಪರ್ಲಡ್ಕ ಮೂಲಕ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಶನಿವಾರ ನಸುಕಿನ ಜಾವ 4.30ರ ಸುಮಾರಿಗೆ ಪರ್ಲಡ್ಕ ಬಳಿಯ ಕಾವೇರಿ ಎಂಟರ್‌ಪ್ರೈಸಸ್‌ನ ಮುಂಭಾಗ ಗ್ಯಾರೇಜೊಂದರ ಪಕ್ಕದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಪಕ್ಕದ ಮನೆಯವರಿಗೆ ಬೆಳಗ್ಗಿನ ಜಾವ 4.30ರ ಸುಮಾರಿಗೆ ದೊಡ್ಡದಾದ ಶಬ್ದವೊಂದು ಕೇಳಿಸಿತ್ತು. ಆದರೆ ಅಪಘಾತ ನಡೆದದ್ದು, ಬೆಳಗ್ಗೆ 6 ಗಂಟೆಗಷ್ಟೆ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿದ್ದೆಯ ಮಂಪರಿನಲ್ಲಿದ್ದ ಚಾಲಕ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಅಣ್ಣು ನಾಯ್ಕ್ ಹಾಗೂ ಅವರ ಮಗ ಚಿದಾನಂದ್, ಪಕ್ಕದ ಮನೆಯ ರಮೇಶ್ ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.