ಮಂಗಳೂರು : ಸ್ವಾತಂತ್ರ್ಯ ನಂತರದ 78 ವರ್ಷಗಳಲ್ಲಿ ರಾಜಕೀಯ ವ್ಯವಸ್ಥೆಯು ನಮ್ಮ ಸಮಾಜವನ್ನು ಜಾತಿ, ಧರ್ಮ, ದ್ವೇಷ ಮತ್ತು ಮೂಲಭೂತವಾದದ ಮೂಲಕ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದೆ. ಇಂತಹ ಮನಸ್ಥಿತಿಯವರು ದೇಶದ್ರೋಹಿಗಳು ಎಂದು ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗ ಮತ್ತು ಸಾಮಾಜಿಕ ಚಿಂತಕ ತುಷಾರ್ ಗಾಂಧಿ ಅಭಿಪ್ರಾಯಿಸಿದ್ದಾರೆ.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕಜೆಮಾರು ಕೆದಂಬಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆದ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಷಾರ್ ಗಾಂಧಿ ಅವರು ‘ಇಂದಿನ ಯುವಜನತೆಗೆ ಗಾಂಧೀ ವಿಚಾರಧಾರೆಯ ಪ್ರಸ್ತುತತೆ’ ಬಗ್ಗೆ ಮಾತನಾಡಿ, ಕಾಮನಬಿಲ್ಲು ಏಳು ಬಣ್ಣಗಳಿಂದ ಭಿನ್ನ ಗುರುತನ್ನು ಹೊಂದಿದ್ದರೂ ಅದು ಭಿತ್ತರಗೊಳ್ಳುವಾಗ ತನ್ನ ಎಲ್ಲಾ ಬಣ್ಣಗಳೂ ಒಂದೇ ಎಂಬ ಐಕ್ಯತೆಯ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು.
ಅವರು, ಇಂದು ಧರ್ಮ, ಜಾತಿ, ದ್ವೇಷದ ಮೂಲಕ ದೇಶದ ಜನರ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸುತ್ತಿರುವ ದೇಶದ್ರೋಹಿಗಳ ವಿರುದ್ಧ ಹೋರಾಟದ ಧ್ವನಿ ಮೊಳಗಬೇಕಾಗಿದೆ ಎಂದು ಕರೆ ನೀಡಿದರು. ಈ ಜವಾಬ್ಧಾರಿಯನ್ನು ಯುವಕರು ವಹಿಸಬೇಕು ಎಂದರು.
ಉತ್ತರ ಪ್ರದೇಶದಲ್ಲಿ ಬಾಲಕನೊಬ್ಬ ಟಿಫಿನ್‌ನಲ್ಲಿ ಬಿರಿಯಾನಿ ಇದೆ ಎಂದು ಆತನನ್ನು ಶಾಲೆಯಿಂದ ಹೊರದಬ್ಬಲಾಗುತ್ತದೆ. ಪೊಲೀಸ್ ಪೇದೆಯೊಬ್ಬ ರೈಲಿನಲ್ಲಿ ಮುಸ್ಲಿಂ ವ್ಯಕ್ತಿಯೆಂಬ ಕಾರಣಕ್ಕೆ ಗುಂಡೇಟು ಹಾಕಿ ಕೊಲ್ಲುತ್ತಾನೆ. ಇಂತಹ ಅಮಾನುಷ ಕೃತ್ಯಗಳ ಬಗ್ಗೆ ಯುವಕರು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ಹೇಳಿದರು.
ತುಷಾರ್ ಗಾಂಧಿ ಅವರು, ಸಂವಿಧಾನ ವಿರೋಧಿ ಕಾನೂನುಗಳು ದೇಶದ ಸಂಸತ್ತಿನಲ್ಲಿ ಚರ್ಚೆ ರಹಿತವಾಗಿ ಮಂಜೂರಾಗುತ್ತಿವೆ ಎಂದು ಹೇಳಿದರು.
ಭಾಷೆ, ಜಾತಿ, ಲಿಂಗ, ಧರ್ಮದ ಆಧಾರದಲ್ಲಿ ನಡೆಯುತ್ತಿರುವ ದ್ವೇಷದ ವಿರುದ್ಧ ಪ್ರೀತಿ, ಭಾತೃತ್ವ ಹಾಗೂ ಒಗ್ಗಟ್ಟಿನ ಮೂಲಕ ಉತ್ತರ ನೀಡಬೇಕಾಗಿದೆ.
ಗಾಂಧಿಯ ಪ್ರಸ್ತುತತೆ
ಯುವಕರು ಗಾಂಧಿಯ ಪ್ರಸ್ತುತತೆಯನ್ನು ಅರಿಯಬೇಕು ಮತ್ತು ನಮ್ಮ ಪೂರ್ವಜರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ ಬಲಿದಾನದ ಮಹತ್ವವನ್ನು ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು.
ರಾಜಕೀಯ ವ್ಯವಸ್ಥೆಯ ಬದಲಾವಣೆ
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಬಡತನವಿದ್ದರೂ ಒಗ್ಗಟ್ಟಿದ್ದ ಕಾರಣ ಬ್ರಿಟಿಷರಿಂದ ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಯಿತು. ಆದರೆ ಇಂದು ರಾಜಕೀಯ ನಾಯಕರು ಅಧಿಕಾರಕ್ಕಾಗಿ ಬ್ರಿಟಿಷರ ವಿಭಜಿಸಿ ಆಳುವ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.