ಉಡುಪಿ : ಕರಾವಳಿ ಬೈಪಾಸ್ ಬಳಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿ 6 ಲ.ರೂ.ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಾಗಲಕೋಟೆಯ ಯಲ್ಲಪ್ಪ ಮಲ್ಲಪ್ಪ ಬೋವಿ(37) ಎಂದು ಗುರುತಿಸಲಾಗಿದೆ.
ಆ.7ರಂದು ಕರಾವಳಿ ಬೈಪಾಸ್ ಬಳಿ ಇರುವ ಈಜಿ ಲೈಫ್ ಕೃಷಿ ಯಂತ್ರೋಪಕರಣಗಳ ಮಾರಾಟ ಸಂಸ್ಥೆಯಲ್ಲಿ ಚಾಲಕರಾಗಿರುವ ಯಲ್ಲಪ್ಪ ಬೋವಿರವರು ಸಂಸ್ಥೆಯ ಮಾಲಕತ್ವದ ಬಜಾಜ್ ಗೂಡ್ಸ್‌ನಲ್ಲಿ ಅವರದೇ ತೀರ್ಥಹಳ್ಳಿಯಲ್ಲಿರುವ ಇನ್ನೊಂದು ಶಾಖೆಯಿಂದ ವಿವಿಧ ಬಗೆಯ ಸಾಮಗ್ರಿಗಳನ್ನು ತುಂಬಿಕೊಂಡು ಉಡುಪಿ ಶಾಖೆಗೆ ತಂದು ಆ.4ರಂದು ನಿಲ್ಲಿಸಿದ್ದರು.
ಆ.5ರಂದು ಬೆಳಗ್ಗೆ ಸಂಸ್ಥೆಯಲ್ಲಿ ಕೆಲಸ ಮಾಡುವ ಶ್ರೇಯಸ್ ಅವರು ಗೂಡ್ಸ್ ರಿಕ್ಷಾದಲ್ಲಿದ್ದ ವಸ್ತುಗಳನ್ನು ತೆಗೆಯುತ್ತಿದ್ದ ಸಮಯ ಅದರಲ್ಲಿದ್ದ 12 ಬಗೆಯ ವಸ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ 6 ಲ.ರೂ.ಗಳಾಗಿದ್ದವು. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಉಡುಪಿ ಠಾಣೆಯ ಪಿಎಸ್‌ಐ ಈರಣ್ಣ ಶಿರಗುಂಪಿ, ಸಿಬಂದಿಗಳಾದ ಆನಂದ, ಶಿವಕುಮಾರ್ ಅವರನ್ನು ವಿಶೇಷ ಕರ್ತವ್ಯದಲ್ಲಿ ನೇಮಿಸಲಾಗಿದ್ದು, ಆರೋಪಿಯನ್ನು ಹಾಗೂ ಕಳವು ಮಾಡಿ ಉಡುಪಿ ಆದಿ ಉಡುಪಿ ಎಪಿಎಂಸಿ ಗೋದಾಮು ಕಟ್ಟಡಗಳ ಸಂಧಿನಲ್ಲಿ ಬಚ್ಚಿಟ್ಟಿದ್ದ 6 ಲ.ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.