Monday, November 25, 2024
Banner
Banner
Banner
Home » ಕೆಸರು ಗದ್ದೆ ಕ್ರೀಡಾ ಕೂಟದಿಂದ ಗ್ರಾಮೀಣ ಸೊಗಡು, ಭವ್ಯ ಪರಂಪರೆಯ ಅನಾವರಣ : ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್

ಕೆಸರು ಗದ್ದೆ ಕ್ರೀಡಾ ಕೂಟದಿಂದ ಗ್ರಾಮೀಣ ಸೊಗಡು, ಭವ್ಯ ಪರಂಪರೆಯ ಅನಾವರಣ : ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್

by NewsDesk

ಉಡುಪಿ : ಕೆಸರು ಗದ್ದೆ ನಮ್ಮ ಮಣ್ಣಿನ ರೈತರ ಬದುಕಿನ ಸಂಕೇತ. ಕೆಸರು ಗದ್ದೆ ಕ್ರೀಡಾ ಕೂಟದಿಂದ ಗ್ರಾಮೀಣ ಸೊಗಡು, ಸಂಸ್ಕೃತಿ ಮತ್ತು ಭವ್ಯ ಪರಂಪರೆಯ ಅನಾವರಣ ಸಾಧ್ಯ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಯುವಕ ಮಂಡಲ(ರಿ.) ಹಿರಿಯರ ವೇದಿಕೆ ಅಂಬಲಪಾಡಿ ಇದರ ಆಶ್ರಯದಲ್ಲಿ ಪರಿಸರದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಯುವಕ ಮಂಡಲ(ರಿ.) ಹಿರಿಯರ ವೇದಿಕೆ ಅಧ್ಯಕ್ಷ ಹರೀಶ್ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಅಂಬಲಪಾಡಿ ಬೀಡು ಮಾರ್ಗ ಸೀತಾರಾಮ ಶೆಟ್ಟಿಯವರ ಗದ್ದೆಯಲ್ಲಿ ನಡೆದ ಕೆಸರು ಗದ್ದೆ ಕ್ರೀಡಾ ಕೂಟ ‘ಕೆಸರ್ದ ಗೊಬ್ಬು’ ಕಾರ್ಯಕ್ರಮವನ್ನು ತೆಂಗಿನ ತೆನೆ ಅರಳಿಸಿ, ಕಳಸಕ್ಕೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ, ಮಾತನಾಡಿದರು.

ಸಂಸ್ಕೃತಿಯಲ್ಲಿ ಮಣ್ಣಿಗೆ ಬಹಳಷ್ಟು ಮಹತ್ವವಿದೆ. ಮನುಷ್ಯನಿಗೂ ಮಣ್ಣಿಗೂ ಅವಿನಾಭಾವ ಸಂಬಂಧ. ಪಂಚಭೂತಗಳಲ್ಲಿ ಮಣ್ಣು ಒಂದು ವಿಶಿಷ್ಟವಾದ ಅಂಶ. ‘ಮಣ್ಣಿನಿಂದ ದೇಹ, ದೇಹದಿಂದ ಮಣ್ಣಿಗೆ’ ಎಂದು ಪುರಂದರ ದಾಸರು ಹೇಳಿದ್ದಾರೆ. ನಾವು ಅಷ್ಟು ಮಣ್ಣಿನೊಂದಿಗೆ ಹೊಂದಿಕೊಂಡವರು, ಅಲ್ಲೇ ಹುಟ್ಟಿ ಅಲ್ಲಿಗೇ ಸೇರುವವರು. ಗ್ರಾಮೀಣ ಪ್ರದೇಶ ಕೃಷಿ ಪ್ರಧಾನವಾದ ಪ್ರಾಂತ್ಯ. ಕೃಷಿಗೆ ಮಣ್ಣು ಅತೀ ಮುಖ್ಯ. ಇದಕ್ಕೆ ದೊಡ್ಡ ಇತಿಹಾಸವೇ ಇದೆ. ಮಣ್ಣು ತುಂಬಾ ಫಲವತ್ತಾಗಿರುತ್ತದೆ. ಉಸಿರಾಟಕ್ಕೆ ಆಮ್ಲಜನಕ ಕೊಡುವ ಮರ ಗಿಡ ಸಸ್ಯಗಳಿಗೆ ಮಣ್ಣು ಬೇಕು. ಕೆಸರಿನಲ್ಲಿ ನಿರ್ಮಲವಾಗಿ ಅರಳುವ ತಾವರೆಯಂತೆ ನಾವು ಬದುಕಬೇಕು ಎಂದರು.

ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಅವರು ಕೆಸರು ಗದ್ದೆಗೆ ಹಾಲೆರೆದು, ಗದ್ದೆಯಲ್ಲಿದ್ದ ಮಕ್ಕಳತ್ತ ಬಾಲ್ ಎಸೆಯುವ ಮೂಲಕ ಕೆಸರು ಗದ್ದೆಯ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಯುವಕ ಮಂಡಲ ಹಿರಿಯರ ವೇದಿಕೆಯ ಗೌರವಾಧ್ಯಕ್ಷ ಕೀರ್ತಿ ಶೆಟ್ಟಿ, ಗದ್ದೆಯ ಮಾಲಕ ಸೀತಾರಾಮ ಶೆಟ್ಟಿ, ಅಂಬಲಪಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂದಿರದ ಅಧ್ಯಕ್ಷ ಭರತ್ ರಾಜ್ ಕೆ.ಎನ್., ವಿಶ್ವಕರ್ಮ ಸಂಘ ಅಂಬಲಪಾಡಿ ಅಧ್ಯಕ್ಷ ಜಗದೀಶ್ ಆಚಾರ್ಯ ಕಪ್ಪೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಭಾರತಿ ಭಾಸ್ಕರ್, ಲಕ್ಷ್ಮಣ ಪೂಜಾರಿ, ಕುಸುಮ ಕಿಶೋರ್, ಹರೀಶ್ ಪಾಲನ್, ಸುನೀಲ್ ಕುಮಾರ್ ಕಪ್ಪೆಟ್ಟು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಪ್ರದೀಪ್ ಶೆಟ್ಟಿ, ಮೋಹನ ಬಲ್ಲಾಳ್, ನವೀನ್ ಸುವರ್ಣ, ಜಗನ್ನಾಥ್ ಕಪ್ಪೆಟ್ಟು, ಪ್ರಕಾಶ್ ಆಚಾರ್ಯ, ಸವಿತಾ ಸಂತೋಷ್, ಗೀತಾ ಪಾಲನ್, ವಿಲಾಸಿನಿ ಆಚಾರ್ಯ ಹಾಗೂ ಯುವಕ ಮಂಡಲದ ಹಿರಿಯರ ವೇದಿಕೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ಪರ್ಧಾಳುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಧರ್ಮದರ್ಶಿಗಳಿಂದ ಹಣ್ಣು ಕಾಯಿ ಪ್ರಸಾದ ಸ್ವೀಕರಿಸಿ, ಅವರನ್ನು ಅಂಬಲಪಾಡಿ ಬೀಡು ಮನೆಯಿಂದ ಬ್ಯಾಂಡ್ ಸಹಿತ ಮೆರವಣಿಗೆಯಲ್ಲಿ ಕೆಸರು ಗದ್ದೆಯ ಬಳಿ ಕರೆತರಲಾಯಿತು.

ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಯೋಗೀಶ್ ಕೊಳಲಗಿರಿ, ಪ್ರಶಾಂತ್ ಕೆ.ಎಸ್. ಮತ್ತು ಅಜಿತ್ ಕಪ್ಪೆಟ್ಟು ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲ(ರಿ.) ಹಿರಿಯರ ವೇದಿಕೆ ಅಂಬಲಪಾಡಿ ಉಪಾಧ್ಯಕ್ಷ ನಾಚಿಕೇತ್ ಶೆಟ್ಟಿಗಾರ್ ವಂದಿಸಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb