ಉಡುಪಿ : ಅಮೆರಿಕಾದಲ್ಲಿ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಪಟ್ಲ ಸತೀಶ್ ಶೆಟ್ಟಿಯವರ ನಾಯಕತ್ವದಲ್ಲಿ ಯಕ್ಷಧ್ರುವ ಫೌಂಡೇಶನ್ ಕಲಾತಂಡದ ಕಲಾವಿದರು ಪುತ್ತಿಗೆ ಮಠದ ಪ್ರಥಮ ದೇವಾಲಯವೆಂದು ಪ್ರಖ್ಯಾತವಾದ ಫೀನಿಕ್ಸ್‌ನಲ್ಲಿರುವ ಶ್ರೀವೆಂಕಟ ಕೃಷ್ಣ ಕ್ಷೇತ್ರದಲ್ಲಿ ದೇವೀ ಮಾಹಾತ್ಮೆ ಯಕ್ಷಗಾನ ಪ್ರದರ್ಶನವನ್ನು ಕಿಕ್ಕಿರಿದ ಸಭಾಂಗಣದಲ್ಲಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಸಿಟಿ ಮೇಯೆರ್, ಈ ಕಾರ್ಯಕ್ರಮದಲ್ಲಿ ಕಂಡುಬಂದ ಅದ್ಭುತ ಚೆಂಡೆ ವಾದನ ಮತ್ತು ವಿಶಿಷ್ಟ ರೀತಿಯ ಕುಣಿತ ಮತ್ತು ಅಪೂರ್ವ ಗಾಯನದಿಂದ ಕೂಡಿದ ಈ ಕಲೆಯನ್ನು ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರದರ್ಶನ ನೀಡಿದ ದಿನವನ್ನೇ (ಜುಲೈ 27ನ್ನು) ಪ್ರತಿವರ್ಷ ಯಕ್ಷಗಾನ ಫೌಂಡೇಶನ್ ಡೇ ಎಂದು ಘೋಷಿಸಿದರು.
ಅಮೇರಿಕಾದ ನೆಲದಲ್ಲಿ ಪ್ರಥಮ ಬಾರಿ ಯಕ್ಷಗಾನ ಕಲಾ ಸಂಸ್ಥೆಯೊಂದಕ್ಕೆ ಪ್ರಥಮ ಬಾರಿ ಈ ರೀತಿಯ ಸರಕಾರಿ ಗೌರವ ದೊರೆತಿದ್ದು ವಿದೇಶ ಮತ್ತು ಸ್ವದೇಶದಲ್ಲಿರುವ ಯಕ್ಷಗಾನ ಪ್ರೇಮಿಗಳನ್ನು ಹರ್ಷ ಪುಳಕಿತರನ್ನಾಗಿಸಿದೆ.
ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯನ್ನು ಬಾಲ್ಯದಲ್ಲಿಯೇ ಅಭ್ಯಸಿಸಿದ್ದ ಮಠದ ಪ್ರಧಾನ ಅರ್ಚಕರಾದ ಕಿರಣ್ ಭಟ್‌ರವರ ಧರ್ಮಪತ್ನಿ ಅರ್ಚನಾ ಕಿರಣ್‌ರವರು ಮತ್ತು ಉದಯ ಕಲ್ಲೂರಾಯ ಮತ್ತಿತರ ಹಲವು ಕಾರ್ಯಕರ್ತರು ಭಾಗವಹಿಸಿ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರರಾದರು.
ಯಕ್ಷಧ್ರುವ ಫೌಂಡೇಶನ್ ಮುಖ್ಯಸ್ಥರಾದ ಪಟ್ಲ ಸತೀಶ್ ಶೆಟ್ಟಿ ಭಾರತೀಯ ಸಾಂಪ್ರದಾಯಿಕ ಪ್ರಾಚೀನ ಯಕ್ಷಗಾನ ಕಲೆಗೆ ಪುತ್ತಿಗೆ ಶ್ರೀಪಾದರನ್ನು ಮನಸಾರೆ ಪ್ರಶಂಸಿಸಿ ಭಕ್ತಿ ಪೂರ್ವಕ ಕೃತಜ್ಞತೆಯನ್ನು ಅರ್ಪಿಸಿದರು.
ಈ ಕಲಾ ತಂಡವು ಅಮೆರಿಕಾದ್ಯಂತ ಸಂಚರಿಸಿ ಪ್ರದರ್ಶನ ನೀಡಲಿದ್ದು ಪುತ್ತಿಗೆ ಮಠದ ನ್ಯೂಜರ್ಸಿ, ಹುಸ್ಟೋನ್ ಮುಂತಾದ ಹೆಚ್ಚಿನ ಶಾಖೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಲಿದೆ ಎಂದು ಮಠದ ಅಂತಾರಾಷ್ಟ್ರ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮಾಹಿತಿ ನೀಡಿದ್ದಾರೆ.