ಉಡುಪಿ : ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಘಟಕದ ಕಾರ್ಯದರ್ಶಿ ಸಿಪಿಎಂ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮೇಲೆ ದುರುದ್ದೇಶಪೂರಿತ ಎಫ್ಐಆರ್ ದಾಖಲಿಸಿರುವುದನ್ನು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ. ಇದು ವೈದ್ಯಕೀಯ ರಂಗವನ್ನು ಕೋಮುಗ್ರಸ್ಥ ಮಾಡುವ ಪ್ರಯತ್ನ ಎಂದು ಸಿಪಿಎಂ ಆರೋಪಿಸಿದೆ.
ಕೆಲವು ದಿನಗಳ ಹಿಂದೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮುಸ್ಲಿಂ ಕುಟುಂಬ ಹಾಗೂ ವೈದ್ಯರೊಂದಿಗೆ ನಡೆದ ವಾಗ್ವಾದದ ಪ್ರಕರಣದಲ್ಲಿ ಕುಟುಂಬದ ಧರ್ಮದ ಗುರುತನ್ನು ಮುಂದು ಮಾಡಿ ಐಎಂಎ ಪುತ್ತೂರು ಘಟಕ ಹಾಗೂ ಸಂಘಪರಿವಾರ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿದೆ. ಅಲ್ಲಿ ಮುಸ್ಲಿಮರ ವಿರುದ್ದದ ದ್ವೇಷದ ಮಾತುಗಳನ್ನು ಆಡಿರುವುದನ್ನು ಪಕ್ಷದ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ಖಂಡಿಸಿ ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ಪ್ರಕಟಿಸಿರುವುದಕ್ಕೆ ಮುನೀರ್ ಕಾಟಿಪಳ್ಳ ಹಾಗೂ ಪತ್ರಿಕಾ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ ಮೇಲೆ ಎಫ್ಐಆರ್ ದಾಖಲಿಸಿರುವುದು ರಾಜಕೀಯ ಪ್ರೇರಿತವಾಗಿದೆ. ಇದು ವೈದ್ಯಕೀಯ ಕ್ಷೇತ್ರದ ಆದರ್ಶಗಳಿಗೆ ಕಳಂಕ ತರುವಂತಿದೆ ಎಂದು ಸಿಪಿಎಂ ಹೇಳಿದೆ. ವೈದ್ಯಕೀಯ ಸಂಘ (ಐಎಂಎ) ದ ಸ್ಥಳೀಯ ಘಟಕದ ಈ ನಡೆ ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಆದುದರಿಂದ ಪ್ರಜ್ಞಾ ವಂತ ವೈದ್ಯರು ಈ ಪ್ರಕರಣ ಮುಂದುವರಿಯದಂತೆ ಗಮನಹರಿಸಬೇಕು ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.