ಉಡುಪಿ : ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಗೇಟ್‌ಗಳಲ್ಲಿ ನಡೆಯುತ್ತಿದ್ದ ಅನ್ಯಾಯಕ್ಕೆ ತಾತ್ಕಾಲಿಕ ಗೆಲುವು ಸಿಕ್ಕಿದೆ. ಇದರಿಂದ ಕರಾವಳಿ ಬಸ್ಸು ಮಾಲಕರ ಸಂಘ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

7,500ರಿಂದ 12,000 ಕೆಜಿ ತೂಕದ ಬಸ್ಸುಗಳು ಟೋಲ್ ಗೇಟ್‌ಗಳಿಂದ ಫಾಸ್ಟ್ ಟ್ಯಾಗ್ ಬಳಸಿ ತೆರಳುವಾಗ, ಟೋಲ್ ಶುಲ್ಕ ಅಕೌಂಟ್‌ನಿಂದ ಡೆಬಿಟ್ ಆಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಮತ್ತೆ ಫಾಸ್ಟ್ ಟ್ಯಾಗ್‌ನಿಂದ ಹಣ ಕಡಿತ ಆಗುತ್ತಿತ್ತು. ಈ ಅನ್ಯಾಯದ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಈ ಟೋಲ್ ಸುಲಿಗೆಯಿಂದ ಬಸ್ ಮಾಲಕರಿಗೆ ಸಾವಿರಾರು ರೂ.ನಷ್ಟ ಆಗುತ್ತಿತ್ತು. ಇದರಿಂದ ಅಸಮಾಧಾನಗೊಂಡ ಸಂಘವು ಹಲವು ಬಾರಿ ಪ್ರತಿಭಟನೆ ನಡೆಸಿತ್ತು. ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿತ್ತು. ಇಲ್ಲೂ ಪರಿಹಾರ ಸಿಗದ ಕಾರಣ, ಕೊನೆಗೆ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ಪ್ರಕರಣಕ್ಕೆ ಇದೀಗ ಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅದರಂತೆ ಮುಂದಿನ ಆದೇಶದ ತನಕ ಹೆಚ್ಚುವರಿ ಹಣವನ್ನು ಕಡಿತ ಮಾಡುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅದಕ್ಕೆ ಟೋಲ್ ಗುತ್ತಿಗೆದಾರರೂ ಒಪ್ಪಿದ್ದಾರೆ ಅಂತ ಕರಾವಳಿ ಬಸ್ಸು ಮಾಲಕರ ಸಂಘದ ರಾಘವೇಂದ್ರ ಭಟ್ ತಿಳಿಸಿದ್ದಾರೆ.