ಉಡುಪಿ : ಕರ್ನಾಟಕ ರಾಜ್ಯದ 5,995 ಗ್ರಾಮ ಪಂಚಾಯತ್‌ಗಳೂ ಸೇರಿದಂತೆ, ಭಾರತ ದೇಶದಲ್ಲಿ 2,55,401 ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 16,77,005 ಮಂದಿ ಪಂಚಾಯತ್ ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಇ.ಎಸ್.ಐ. (ಆರೋಗ್ಯ ವಿಮೆ) ಸೌಲಭ್ಯ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಬಡವರ ಮಧ್ಯೆ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ನೀರುಗಂಟಿ, ಜಾಡಮಾಲಿ, ವಾಟರ್ ಮೆನ್, ಕಂಪ್ಯೂಟರ್ ಆಪರೇಟರ್, ಜವಾನ ಸೇರಿದಂತೆ, 10 ಕ್ಕಿಂತ ಕಡಿಮೆ ಸಿಬ್ಬಂದಿಗಳಿರುವುದರಿಂದ ಈಗಿರುವ ನಿಯಮದಂತೆ ಈ ಸಿಬ್ಬಂದಿಗಳು ಆರೋಗ್ಯ ವಿಮೆಯಿಂದ ವಂಚಿತರಾಗಿದ್ದು ಸಂಕಷ್ಟ ಪಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪಂಚಾಯತ್ ಸಿಬ್ಬಂದಿಗಳಿಗೂ ಇಎಸ್ಐ ಸೌಲಭ್ಯ ನೀಡಿ, ಬಡ ಸಿಬ್ಬಂದಿಗಳ ಕುಟುಂಬಕ್ಕೆ ನೆರವಾಗಬೇಕೆಂದು ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸುಕ್ ಮಾಂಡವೀಯರನ್ನು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು, ಇಲ್ಲಿಯವರೆಗೆ ನನ್ನ ಗಮನಕ್ಕೆ ಇದು ಬಂದಿರಲಿಲ್ಲ. ಈ ಬಗ್ಗೆ ಅಗತ್ಯ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಾಗಲಕೋಟೆ ಲೋಕಸಭೆ ಸದಸ್ಯ ಪಿ.ಸಿ ಗದ್ದಿಗೌಡರ್ ಉಪಸ್ಥಿತರಿದ್ದರು.