ಉಡುಪಿ : ಯಕ್ಷಗಾನ ಕ್ಷೇತ್ರದ ವಿದ್ವಾಂಸ, ಮದ್ದಲೆಗಾರ ಬರ್ಗುಳ ಗೋಪಾಲಕೃಷ್ಣ ಕುರುಪ್ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಚೆಂಡೆ-ಮದ್ದಲೆ ನುಡಿತಗಳಲ್ಲಿ ಶಾಸ್ತ್ರಜ್ಞಾನವನ್ನು ಪಡೆದುಕೊಂಡಿದ್ದ ಕುರುಪರು ಅದನ್ನು ಅಧಿಕೃತ ಪಠ್ಯರೂಪದಲ್ಲಿ ಪ್ರಕಟಿಸಿದ ಮೊದಲಿಗರಾಗಿದ್ದರು. ಅವರಿಗೆ ಭಾಗವತಿಕೆಯ ಬಗ್ಗೆಯೂ ಆಳವಾದ ಜ್ಞಾನವಿತ್ತು. 1952 ರಲ್ಲಿ ಕೂಡ್ಲು ಮೇಳದಲ್ಲಿ ಪೂರ್ವರಂಗಕ್ಕೆ ಹಾಡುವ ಅವಕಾಶ ದೊರೆತು ಮದ್ಲೆಗಾರ ಕುದ್ರೆಕೂಡ್ಲು ರಾಮಭಟ್ಟರ ಮೆಚ್ಚುಗೆಗಳಿಸಿ, ಮುಂದೆ, ವೃತ್ತಿಪರರಾಗಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತ, ಹಿರಿಯ ಅಗರಿ ಶ್ರೀನಿವಾಸ ಭಾಗವತ, ಹಿರಿಯ ಕುದ್ರೆಕೂಡ್ಲು ರಾಮ ಭಟ್ಟ, ನಾಂಬಾಡಿ ಸುಬ್ಬಯ ಶೆಟ್ಟಿ, ನೆಡ್ಲೆ ನರಸಿಂಹ ಭಟ್ಟ ಮೊದಲಾದವರ ಗುರುತ್ವದಲ್ಲಿ ಜ್ಞಾನವನ್ನು ಸಿದ್ಧಿಸಿಕೊಂಡು, ಅದೇ ಶ್ರದ್ಧೆಯಲ್ಲಿ ಗುರುಗಳಾಗಿ ಅನೇಕ ಮಂದಿ ಶಿಷ್ಯರನ್ನು ಸಿದ್ಧಗೊಳಿಸಿದ್ದರು. ಮೃದಂಗ ವಿದ್ವಾನ್ ಟಿ. ಆರ್. ಕೃಷ್ಣನ್‌ರಲ್ಲಿ ಮೃದಂಗ ನುಡಿತದ ಸೂಕ್ಷ್ಮಗಳನ್ನು ಕಲಿತಿದ್ದರು. ಅನೇಕ ಯಕ್ಷಗಾನ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಯಕ್ಷಗಾನದ ಹಿಮ್ಮೇಳ ವಿಭಾಗಕ್ಕೊಂದು ಲಕ್ಷಣಗ್ರಂಥವನ್ನು ರಚಿಸುವ ನಿಟ್ಟಿನ ಪ್ರಯತ್ನವಾಗಿ ‘ತೆಂಕುತಿಟ್ಟು-ಪ್ರಾಥಮಿಕ ಯಕ್ಷಗಾನ ಪಾಠಗಳು’ ಕೃತಿಯನ್ನು ಬರೆದು ಪ್ರಕಟಿಸಿದ್ದರು.
ಗೋಪಾಲಕೃಷ್ಣ ಕುರುಪ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.