ಉಡುಪಿ : ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಭಾಗವಾಗಿ ನೆಲ – ನೀರು – ಆಕಾಶ ಎಂಬ ಒಂದು ದಿನದ ವಿಜ್ಞಾನ ಕಾರ್ಯಾಗಾರವನ್ನು ಎಸ್.ಎಮ್.ಎಸ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಸಿ) ಬ್ರಹ್ಮಾವರದಲ್ಲಿ ಮಾರ್ಚ್ 1 ರಂದು ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಒ.ಎಸ್.ಸಿ. ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಎಮ್.ಸಿ. ಮಥಾಯಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನ ಅಂಜುಂ, ಪೂರ್ಣಪ್ರಜ್ಞ ಕಾಲೇಜು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಪ್ರತಿಭಾ ಸಿ. ಆಚಾರ್ಯ ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರದಲ್ಲಿ ಖ್ಯಾತ ಪರಿಸರ ತಜ್ಞ ದಿನೇಶ್ ಹೊಳ್ಳರೊಂದಿಗೆ ಹಸಿರು ಮಾತುಕತೆ, ಸಾರಾ ಸಂಸ್ಥೆಯಿಂದ ಸಹ್ಯಾದ್ರಿ ಬಿತ್ತಿ ಚಿತ್ರ ಪ್ರದರ್ಶನ ಮತ್ತು ಪ್ರೇಮಾನಂದ ಕಲ್ಮಾಡಿ ಅವರೊಂದಿಗೆ ಪಶ್ಚಿಮ ಘಟ್ಟಗಳ ಜೀವವೈವಿಧ್ಯ ಸಂರಕ್ಷಣೆ ಬಗೆಗಿನ ಸಂವಾದ, ಉದಯ್ ಗಾಂವಕಾರ ಚಟುವಟಿಕೆಗಳು, ವ್ಯಾಸ ಉಪಾಧ್ಯಾಯ ಇವರಿಂದ ಖಗೋಳ ದರ್ಶನ, ಸತ್ಯನಾ ಕೊಡೇರಿ ಅವರಿಂದ ಜೀವದ ಹಾಡುಗಳು ಮತ್ತು ಪೂರ್ಣಪ್ರಜ್ಞ ಅಮೆಚೂರ್ ಆಸ್ಟ್ರೋನೊಮರ್ಸ್ ಕ್ಲಬ್ ಇವರಿಂದ ನಕ್ಷತ್ರ – ರಾತ್ರಿಯ ಆಕಾಶ ವೀಕ್ಷಣೆ ನಡೆಯಲಿದೆ. ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ ನಡೆಯುವ ಈ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಸುತ್ತಲಿನ ಹಲವು ಶಾಲೆಗಳ ಸುಮಾರು 300 ಮಕ್ಕಳು ಭಾಗವಹಿಸಲಿದ್ದಾರೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಇದರ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.