ಉಡುಪಿ : ರಾಜ್ಯದಲ್ಲಿ ಕಾನೂನನ್ನು ಕಾಯಬೇಕಾದವರೇ ಕೊಲ್ಲುತ್ತಿದ್ದಾರೆ. ಯಾರೇ ಕಿಡಿಗೇಡಿಗಳು ತಪ್ಪು ಮಾಡಿದ್ದರೂ ಅವರ ಜಾತಿಯ ಆಧಾರದ ಮೇಲೆ ತಪ್ಪು ಯಾರದೆಂದು ನಿರ್ಧರಿಸುವ ಮಟ್ಟಕ್ಕೆ ರಾಜ್ಯ ಸರ್ಕಾರ ಬಂದಿದೆ. ಗೃಹ ಸಚಿವರ ಹೇಳಿಕೆ ನಿಜಕ್ಕೂ ಶೋಚನೀಯ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದಯಗಿರಿಯಲ್ಲಿ ನಡೆದ ಪೊಲೀಸ್ ಠಾಣೆಯ ಮೇಲಿನ ದಾಳಿ ಹಾಗೂ ಹದಿನಾರುಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳ ಮೇಲಿನ ಕಲ್ಲೇಟು ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಸಂಸದ ಕೋಟ ಸರ್ಕಾರವನ್ನು ಟೀಕಿಸಿದ್ದಾರೆ.
“ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ತೂರಿ ಡಿಸಿಪಿ ತಲೆ ಒಡೆದು 16 ಪೊಲೀಸರಿಗೆ ಗಾಯ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಜರಗಿಸುವುದು ಬಿಟ್ಟು ಪೆಟ್ಟು ತಿಂದ ಪೊಲೀಸರದ್ದೇ ತಪ್ಪು ಎಂದ ಗೃಹ ಮಂತ್ರಿಗಳ ನಿಲುವು ನಿಜಕ್ಕೂ ಶೋಚನೀಯ. ಕಾನೂನು ಕಾಯಬೇಕಾದವರೇ ಕೊಂದಂತಾಯಿತು. ಹಿರಿಯ ಸಚಿವ ಪರಮೇಶ್ವರ್ ರಿಂದ ಇಂತಹ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ” ಎಂದು ಸಂಸದ ಕೋಟ ಬೇಸರ ಪ್ರತಿಕ್ರಿಯಿಸಿದ್ದಾರೆ.