ಪಡುಬಿದ್ರಿ : ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಟವರ್ ನಿರ್ಮಾಣ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರಿಂದ ನಿರಂತರವಾಗಿ ಪ್ರತಿಭಟನೆ ಮುಂದುವರಿದಿದೆ.
ಇಲ್ಲಿಂದ ಕೇರಳಕ್ಕೆ ಹೈ-ಟೆನ್ಶನ್ ವಯರ್ ಅಳವಡಿಸುವುದಕ್ಕೆ ಗ್ರಾಮಸ್ಥರ ವ್ಯಾಪಕ ವಿರೋಧವಿದೆ. ಕಳೆದ ಮೂರು ದಿನಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರಾಗಿರುವ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ಶಾಸಕ ಮಂಜುನಾಥ ಭಂಡಾರಿಯವರಿಗೆ ಅದಾನಿ ಪವರ್ ಪ್ರಾಜೆಕ್ಟ್ ಟವರ್ ನಿರ್ಮಾಣದಿಂದ ಇನ್ನಾ ಗ್ರಾಮಸ್ಥರಿಗೆ ಆಗುವ ತೊಂದರೆಯನ್ನು ವಿವರಿಸಿದರು. ಮಾಜಿ ಸಚಿವ ಸಂಸದ ಜಯಪ್ರಕಾಶ್ ಹೆಗ್ಡೆ ಆಗಮಿಸಿ ಹೋರಾಟಗಾರರಿಗೆ ಬೆಂಬಲ ಸೂಚಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.