ಮಣಿಪಾಲ : ಉಡುಪಿಯ ಮಣಿಪಾಲ ಸಮೀಪ ಈಶ್ವರ ನಗರದಲ್ಲಿರುವ ನಗರಸಭೆಯ ಕುಡಿಯುವ ನೀರಿನ ಪಂಪ ಹೌಸ್‌ನೊಳಗೆ ಏಕಾಏಕಿ ಕಾರು ನುಗ್ಗಿದೆ. ಮಣಿಪಾಲದಿಂದ ಶಿವಮೊಗ್ಗ ಕಡೆಗೆ ಹೊರಟ ಕಾರು ಇದಾಗಿದ್ದು, ಇಲ್ಲಿನ ರಸ್ತೆ ಅವಸ್ಥೆ ಕುರಿತು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಮಾರುತಿ ಬೆಲೆನೋ ಕಾರಿನಲ್ಲಿ ಐವರು ಪ್ರಯಾಣಿಕರಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲದಿಂದ ಈಶ್ವರ ನಗರ ತನಕ ಕಾಂಕ್ರೀಟ್ ರಸ್ತೆ ಇದ್ದು ನಂತರ ಮಣ್ಣಿನ ರಸ್ತೆ ಗೋಚರಿಸುತ್ತದೆ. ದೂರದ ಊರಿನಿಂದ ಬರುವವರೆಗೆ ಚಾಲಕರಿಗೆ ದಿಕ್ಕು ತಪ್ಪಿಸುವ ಪಾಯಿಂಟ್ ಇದಾಗಿದ್ದು, ನಗರಸಭೆ ಪಂಪ್ ಹೌಸಿಗೆ ಯಾವುದೇ ಭದ್ರತೆ ಒದಗಿಸಿಲ್ಲ. ಗೋಡೆ ನಿರ್ಮಿಸಿಯೂ ಇಲ್ಲ. ಹಾಗಾಗಿ ಪದೇ ಪದೇ ಇಲ್ಲಿ ವಾಹನಗಳು ನುಗ್ಗುತ್ತಿವೆ.
ರಾಷ್ಟ್ರೀಯ ಹೆದ್ದಾರಿಗೆ ಬಿಟ್ಟುಕೊಟ್ಟ ಜಾಗದಲ್ಲಿ ಯಾವುದೇ ಬೇಲಿ ನಿರ್ಮಾಣ ಮಾಡಿಲ್ಲ. ಈ ಜಾಗದಲ್ಲಿ ಪದೇ ಪದೇ ವಾಹನ ಚಾಲಕರು ಅಪಘಾತಕ್ಕೀಡಾಗುತ್ತಿರುವುದು ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯವಾಗಿದೆ. ಆದಷ್ಟು ಬೇಗ ಇಲ್ಲಿನ ಕಾಮಗಾರಿ ಪೂರ್ಣಗೊಳಿಸಬೇಕು, ಕನಿಷ್ಠ ಹಳೆಯ ರಸ್ತೆಯನ್ನಾದರೂ ಮುಂದುವರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.