Thursday, January 16, 2025
Banner
Banner
Banner
Home » ಶಾಂತಿ ಸ್ಥಾಪನೆಗೆ ಸಂಘರ್ಷ ಅನಿವಾರ್ಯ : ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಶಾಂತಿ ಸ್ಥಾಪನೆಗೆ ಸಂಘರ್ಷ ಅನಿವಾರ್ಯ : ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

by NewsDesk

ಉಡುಪಿ : ಶ್ರೀ ಕೃಷ್ಣ ಗೀತೆಯಲ್ಲಿ ಹಿಂಸೆಯನ್ನು ಬೋಧಿಸಿಲ್ಲ, ಆದರೆ ಅಹಿಂಸೆಯನ್ನು ಸಹಿಸಬಾರದು ಎಂದು ಹೇಳಿದ್ದಾನೆ. ಶಾಂತಿ ಸ್ಥಾಪನೆಗೆ ಸಂಘರ್ಷ ಮಾಡಬೇಕಾಗುತ್ತದೆ ಶಾಂತಿಯಿಂದಿರುವುದು ದೌರ್ಬಲ್ಯ ಅಲ್ಲ, ಶಾಂತಿಯನ್ನು ರಕ್ಷಿಸುವುದಕ್ಕೆ ಏನು ಮಾಡುವುದಕ್ಕೂ ಸಿದ್ದ ಎಂದು ತೋರಿಸಬೇಕಾದ ಕಾಲ ಈಗ ಬಂದಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ಅವರು ಬುಧವಾರ ಉಡುಪಿಯಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಬೃಹತ್ ಜನಾಂದೋಲನವನ್ನು ಉದ್ದೇಶಿಸಿ ಮಾತನಾಡಿದರು

ಹಿಂದುಗಳ ಮೇಲೆ ಬಾಂಗ್ಲಾದಲ್ಲಿ ಮಾತ್ರವಲ್ಲ ಭಾರತದಲ್ಲಿಯೂ ಅಕ್ರಮಣ ನಡೆಯುತ್ತಿದೆ. ಅದಕ್ಕೆ ವಕ್ಫ್ ಇತ್ತೀಚಿನ ಉದಾಹರಣೆಯಾಗಿದೆ. ಕೇವಲ ಸಂತ್ರಸ್ತರನ್ನು ರಕ್ಷಿಸಿದರೆ ಸಾಲದು ಈ ಆಕ್ರಮಣದ ಹಿಂದೆ ಇರುವವರನ್ನು ಪತ್ತೆ ಮಾಡಿ ಮಟ್ಟ ಹಾಕುವುದು ಅತ್ಯಗತ್ಯ ಎಂದರು.

ಸಮಾರೋಪ ಭಾಷಣ ಮಾಡಿದ ಕಟಪಾಡಿ ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು, ಹಿಂದುಗಳು ಪಕ್ಷ, ಜಾತಿಗಳನ್ನು ಪಕ್ಕಕ್ಕಿಟ್ಟು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದಲ್ಲಿ ಬಾಂಗ್ಲಾದಲ್ಲಿ ಆದ ಸ್ಥಿತಿ ನಮ್ಮ ದೇಶದಲ್ಲಿಯೂ ಬರಬಹುದು ಎಂದರು

ಸಮಾವೇಶದಲ್ಲಿ ಭಾಗವಹಿಸಿದ ಹಿಂದುಗಳ ಸಂಖ್ಯೆ ಕಡಿಮೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ದೇಶದಲ್ಲಿ ಹಿಂದುಗಳ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹಿಂದುಗಳ ಸಂಖ್ಯೆ ಇಳಿಮುಖವಾಗಬಾರದು, ವೇದಗಳಲ್ಲಿ ಅಷ್ಟ ಪುತ್ರ ಭವ ಎಂದು ಹೇಳಲಾಗಿದೆ, ಅಷ್ಟಾಗದಿದ್ದರೂ ಮನೆಗೆ, ಸಮಾಜಕ್ಕೆ, ಧರ್ಮಕ್ಕೆ ದೇಶಕ್ಕಾಗಿ ನಾಲ್ಕು ಮಕ್ಕಳಾದರೂ ಪ್ರತಿ ಕುಟುಂಬದಲ್ಲಿ ಹುಟ್ಟಬೇಕು ಎಂದು ಶ್ರೀಗಳು ಕರೆ ನೀಡಿದರು.

ವೇದಿಕೆಯಲ್ಲಿ ಹಿರಿಯ ಅಯ್ಯಪ್ಪ ಭಕ್ತರಾದ ಗೋಪಾಲ ಗುರುಸ್ವಾಮಿ, ಉಡುಪಿ ಇಸ್ಕಾನ್‌ನ ಪ್ರಮುಖರಾದ ರಕ್ತಚಂದನ ಗೋವಿಂದಾಸ್ ಜೀ ಉಪಸ್ಥಿತರಿದ್ದರು. ಉಡುಪಿಯ ಮಾತಾ ಅಮೃತಾನಂದಮಯಿ ಸಂಸ್ಥೆಯ ಉಪಾಧ್ಯಕ್ಷೆ ಕಲ್ಪನಾ ಭಾಸ್ಕ‌ರ್ ಮಾತನಾಡಿದರು. ಶ್ರೀನಿಧಿ ಹೆಗ್ಡೆ ಅವರು ರಾಷ್ಟ್ರಪತಿಗೆ ಕಳುಹಿಸುವ ಆಂದೋಲನದ ಆಗ್ರಹಗಳನ್ನು ಓದಿದರು. ಸಾಮರಸ್ಯ ವೇದಿಕೆಯ ಮಂಗಳೂರು ವಿಭಾಗದ ಪ್ರಮುಖ ರವೀಂದ್ರ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುತ್ಯಾರು ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ವಿವಿಧ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರ ಬೃಹತ್ ಮೆರವಣಿಗೆ ನಗರದುದ್ದಕ್ಕೂ ನಡೆಯಿತು. ಮೆರವಣಿಗೆಗೆ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಚಾಲನೆ ನೀಡಿದರು

ಮೆರವಣಿಗೆಯಲ್ಲಿ ಶಾಸಕರಾದ ಗುರುರಾಜ್‌ ಗಂಟಿಗೊಳೆ ಯಶ್‌ಪಾಲ್ ಸುವರ್ಣ, ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್, ಹಿಂದೂ ಸಂಘಟನೆಗಳ ಪ್ರಮುಖರಾದ ಸುನಿಲ್ ಕೆ. ಆರ್., ದಿನೇಶ್ ಮೆಂಡನ್, ಬಿಜೆಪಿಯ ಪ್ರಮುಖರಾದ ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ ಇತರರು ಭಾಗವಹಿಸಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb