ಹೆಬ್ರಿ : ಹೆಬ್ರಿ ಕೆಳಪೇಟೆ ಮೂರು ರಸ್ತೆ ಬಳಿ ಭೋಗಿ ಹಾಡಿಯಲ್ಲಿರುವ ಕಸದ ರಾಶಿಯಲ್ಲಿ ನವೆಂಬರ್ 30ರಂದು ಕೊಳೆತ ಸ್ಥಿತಿಯಲ್ಲಿ ಕಾಣಿಸಿಕೊಂಡ ಶವದ ಗುರುತು ಪತ್ತೆಯಾಗಿದ್ದು, ಶವವು ಹೆಬ್ರಿ ಸಂತೆಕಟ್ಟೆ ನಿವಾಸಿ ರಾಜೀವ ಪಾಣರ (54) ಅವರದ್ದು ಎಂದು ಗುರುತಿಸಲಾಗಿದೆ.
ಇವರು ಬೆಳಂಜೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು ವಿಪರೀತ ಮದ್ಯಪಾನ ಚಟ ಇತ್ತು ಎನ್ನಲಾಗುತ್ತಿದೆ. ನಿತ್ಯ ಮನೆ ಕಡೆ ಹೋಗದೆ ಬಸ್ ತಂಗುದಾಣ ಬಳಿ ಇರುತ್ತಿದ್ದರು ಎನ್ನಲಾಗುತ್ತಿದೆ. ಮೂರು ದಿನಗಳ ಹಿಂದೆ ಭೋಗಿ ಹಾಡಿಯ ಮರದ ಬಳಿ ಕೂತಿದ್ದ ವ್ಯಕ್ತಿಯನ್ನು ಈ ಭಾಗದಲ್ಲಿ ತಿರುಗುತ್ತಿದ್ದ ವಿದ್ಯಾರ್ಥಿಗಳು ನೋಡಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಇನ್ನಾವುದೇ ಕಾರಣದಿಂದ ಮೃತಪಟ್ಟಿದ್ದಾರೋ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.