ಉಡುಪಿ : ರಾಜ್ಯ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನ ತರಬೇತಿ ನೀಡುವ ಅರ್ಹ ಸಂಘ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ಕಾಸರಗೋಡು ಪೆರ್ಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 20ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನ ಅಕಾಡೆಮಿ ಯಕ್ಷಗಾನ ಕಲೆಯ ಬೆಳವಣಿಗೆ ಹಾಗೂ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ಅವರನ್ನು ಗೌರವಿಸುವ ಕಾರ್ಯಕ್ಕೆ ಮುಂದಾಗಿದೆ. ಯಕ್ಷಗಾನ ಕಲೆ ಯನ್ನು ಮುಂದಿನ ಪೀಳಿಗೆಗೆ ದಾಟಿಸುವ ನಿಟ್ಟಿನಲ್ಲಿ ಅನೇಕ ಸಂಘ ಸಂಸ್ಥೆಗಳು ತೊಡಗಿಸಿ ಕೊಂಡಿದ್ದಾರೆ. ಅವರು ಅಕಾಡೆಮಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಗಡಿನಾಡಿನಲ್ಲಿ ಯಕ್ಷಗಾನ ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷ ತರಬೇತಿಯನ್ನು ಮಕ್ಕಳಿಗೆ ಉಚಿತವಾಗಿ ಕಲಿಸಿಕೊಡುತ್ತಿರುವ ನಾಟ್ಯ ಗುರು ಹಾಗೂ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಅಧ್ಯಕ್ಷ ಸಬ್ಬಣ್ಣಕೋಡಿ ರಾಮ ಭಟ್ ಅವರ ನಿಸ್ವಾರ್ಥ ಸೇವೆ ಅಭಿನಂದನೀಯ. ಇಂತಹ ಕಲಾವಿದರ ನಿಸ್ವಾರ್ಥ ಸೇವೆಯಿಂದಲೇ ಯಕ್ಷಗಾನ ಕಲೆ ಉಳಿದಿದೆ ಬೆಳೆಯುತ್ತಿದೆ. ಇದೇ ಮಾದರಿಯ ಸೇವೆ ಮಾಡುತ್ತಿರುವ ಕಲಾವಿದರು ಹಾಗೂ ಸಂಘ ಸಂಸ್ಥೆಗಳಿಗೆ ಅಕಾಡೆಮಿ ಅಧ್ಯಕ್ಷನಾಗಿ ತನ್ನಿಂದಾದ ಎಲ್ಲಾ ನೆರವನ್ನು ನೀಡಲು ಬದ್ಧನಾಗಿದ್ದೇನೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ವಿದ್ಯಾರ್ಥಿಗಳು ಗುರು ಮುಖೇನ ಯಕ್ಷಗಾನ ಕಲಿಯುವುದು ಸೂಕ್ತ. ವಿಡಿಯೋ ನೋಡಿ ಅಭ್ಯಾಸಿಸುವುದು ಸರಿಯಲ್ಲ. ತರಬೇತಿ ಪಡೆದ ಗುರುಗಳು ಸಂಸ್ಥೆಯ ಋಣ ತೀರಿಸುವ ಕೆಲಸ ಮಾಡಬೇಕು. ಸಂದು ಹೋದ ಹಿರಿಯ ಕಲಾವಿದರ ಸ್ಮರಣೆಯಲ್ಲಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಅಭಿನಂದನೀಯ ಎಂದರು.
ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರು ಮಾತನಾಡಿ, ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನದ ಎರಡು ಕಣ್ಣುಗಳಿದ್ದಂತೆ. ಅವು ಬೇರೆ ಪ್ರಕಾರಗಳಲ್ಲ. ಯಾವುದೇ ಅನುದಾನ ಇಲ್ಲದೇ ಕಲೆಯ ಮೇಲಿನ ಪ್ರೀತಿಯಿಂದಲೇ ಸಂಸ್ಥೆಯನ್ನು ಸ್ಥಾಪಿಸಿ ನಡೆಸುವುದು ಸುಲಭ ಸಾಧ್ಯವಲ್ಲ. ಸಾಕಷ್ಟು ಸಂಘರ್ಷ ಎದುರಿಸಿ ಕಲೆಯ ಸೇವೆ ಮಾಡುತ್ತಿರುವ ರಾಮ ಭಟ್ ಅವರoತಹ ಕಲಾವಿದರನ್ನು ಅಕಾಡೆಮಿ ಗುರುತಿಸಿ ಗೌರವಿಸುವ ಕೆಲಸ ಮಾಡಬೇಕು ಎಂದರು.
ಹಿರಿಯ ಯಕ್ಷಗಾನ ಕಲಾವಿದ ಕೋಟೆ ರಾಮ ಭಟ್, ಶಂಕರ್ ಕಾಮತ್ ಚೇವಾರು, ನಿಡ್ಲೆ ಗೋವಿಂದ ಭಟ್ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ನಿಡ್ಲೆ ಗೋವಿಂದ ಭಟ್ ಅವರಿಗೆ ಪಡ್ರೆ ಚಂಡು ಪ್ರಶಸ್ತಿ, ಪ್ರಸಿದ್ಧ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ತೆಂಕ ಬೈಲು ಪ್ರಶಸ್ತಿ, ಕೆ.ಗೋವಿಂದ ಭಟ್ ಅವರಿಗೆ ಚೇವಾರು ಪ್ರಶಸ್ತಿ, ನೆಲ್ಲಿಕಟ್ಟೆ ನಾರಾಯಣ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ಗೋಪಾಲ ಭಟ್ ಗುಂಡಿಮಜಲು ಅವರಿಗೆ ಬಲಿಪ ಪ್ರಶಸ್ತಿ, ದಯಾನಂದ ಶೆಟ್ಟಿ ಜೆಪ್ಪು ಅವರಿಗೆ ಮಾಯಿಲೆಂಗಿ ಪ್ರಶಸ್ತಿ, ರಮೇಶ್ ಶೆಟ್ಟಿ ಬಾಯಾರು ಅವರಿಗೆ ದೇವಕಾನ ಪ್ರಶಸ್ತಿ, ಕುಮಾರ ಸುಬ್ರಹ್ಮಣ್ಯ ವಳಕುಂಜ ಅವರಿಗೆ ಕಲಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅನ್ಯ ಕ್ಷೇತ್ರದ ಸಾಧಕರಿಗೆ ವಿಶೇಷ ಅಭಿನಂದನೆ, ಯಕ್ಷಗಾನ ಸಂಘಗಳಿಗೆ ಗೌರವಾರ್ಪಣೆ ನಡೆಯಿತು.
ಸಂಘದ ಅಧ್ಯಕ್ಷ ಸಬ್ಬಣ್ಣ ಕೋಡಿ ರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜೊಸ್ನಾ ನಿರೂಪಿಸಿದರು.