ಯಕ್ಷಗಾನ ವೇಷಭೂಷಣ, ಬಣ್ಣಗಾರಿಕೆಗೆ ಅಪಮಾನ ಸಲ್ಲದು : ಸರಪಾಡಿ ಅಶೋಕ್‌ ಶೆಟ್ಟಿ

ಉಡುಪಿ : ಕರಾವಳಿಯ ಶ್ರೇಷ್ಠ ಕಲೆಗಳಲ್ಲಿ ಯಕ್ಷಗಾನವು ಒಂದು. ಈ ಕಲೆಗೆ ಸಂಬಂಧಿಸಿದ ವೇಷಭೂಷಣಗಳನ್ನು ಧರಿಸಿ ಭಿಕ್ಷಾಟನೆ ಮಾಡುವುದು, ಅಸಹ್ಯಕರವಾಗಿ ವರ್ತನೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ದ.ಕ., ಉಡುಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ವತಿಯಿಂದ ಉಡುಪಿ ಡಿಸಿ ಹಾಗೂ ಎಸ್ಪಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಪ್ರಕೋಷ್ಠದ ದ.ಕ. ಜಿಲ್ಲಾ ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಸೇರಿದಂತೆ ವಿವಿಧ ಸಭೆ ಸಮಾರಂಭಗಳಲ್ಲಿ ಯಕ್ಷಗಾನ ವೇಷಗಳನ್ನು ಧರಿಸಿಕೊಂಡು ಕಲೆಗೆ ಅಪಮಾನ ಮಾಡುತ್ತಿರುವುದು ಕಂಡು ವೃತ್ತಿಪರ ಕಲಾವಿದರಿಗೆ ತುಂಬಾ ನೋವಾಗುತ್ತಿದೆ. ಯಕ್ಷಗಾನದ ವೇಷಭೂಷಣ, ಬಣ್ಣಗಾರಿಕೆಗೆ ತನ್ನದೇ ಆದ ಧಾರ್ಮಿಕ ಮಹತ್ವವಿದೆ‌. ಅದನ್ನು ಮರೆತು ಈ ರೀತಿಯಲ್ಲಿ ಕಲೆಯ ಗರಿಮೆಗೆ ಧಕ್ಕೆ ತರುತ್ತಿರುವ ಕಾರ್ಯಗಳು ಆಗುತ್ತಿರುವುದು ಬೇಸರ ತಂದಿದೆ ಎಂದವರು ತಿಳಿಸಿದರು.

ಈ ಕುರಿತಂತೆ ಪ್ರಕೋಷ್ಠದ ವತಿಯಿಂದ ದ.ಕ. ಎಸ್ಪಿಯವರಿಗೆ ಮನವಿ ಸಲ್ಲಿಸಿದಾಗ ಅವರು ತಕ್ಷಣ ಸ್ಪಂದಿಸಿ ಎಲ್ಲ ಪೋಲಿಸ್ ಠಾಣೆಗಳಿಗೆ ಸುತ್ತೋಲೆ ಕಳಿಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ ಕೂಡ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದವರು ತಿಳಿಸಿದರು.

ಯಕ್ಷಗಾನ ವೇಷಭೂಷಣಗಳು ಹಾಗು ಪರಿಕರಗಳನ್ನು ಬಾಡಿಗೆ ನೀಡುತ್ತಿರುವ ಸಂಸ್ಥೆಗಳು ಕಲಾವಿದರ ನೋವನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ಪರಿಕರಗಳನ್ನು ಬಾಡಿಗೆಗೆ ನೀಡಬಾರದು. ವೇಷಧಾರಿಗಳಿಂದ ಅಸಭ್ಯ ವರ್ತನೆ ಕಂಡುಬಂದಲ್ಲಿ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆ ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದರು.

ಸುದ್ದಿಗೋಷ್ಟಿಯಲ್ಲಿ ಪ್ರಕೋಷ್ಠದ ಉಡುಪಿ ಜಿಲ್ಲಾ ಸಹ ಸಂಚಾಲಕ ಪ್ರಕಾಶ್ ಕಾಮತ್, ಉಡುಪಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಶ್ರೀನಿಧಿ ಹೆಗ್ಡೆ, ರಾಜಶೇಖರ್, ಸುರೇಂದ್ರ ಪಣಿಯೂರು ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ