ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ “ಹರಿಲೀಲಾ” ಪ್ರಶಸ್ತಿ ಪ್ರದಾನ; “ರತ್ನಾವತಿ ಕಲ್ಯಾಣ – ಕುಮಾರ ವಿಜಯ; ಪ್ರಸಂಗ ನಡೆ – ರಂಗ ತಂತ್ರ” ಪುಸ್ತಕ ಬಿಡುಗಡೆ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆದ ‘ಹರಿಲೀಲಾ ಯಕ್ಷನಾದೋತ್ಸವ’ ಸಮಾರಂಭದಲ್ಲಿ‌ ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ “ಹರಿಲೀಲಾ” ಯಕ್ಷಗಾನ ಪ್ರಶಸ್ತಿ ಪ್ರದಾನ ಹಾಗೂ ನಂದಳಿಕೆಯ ಮುದ್ದಣ ಪ್ರಕಾಶನ – ಅಧ್ಯಯನ ಕೇಂದ್ರ ಪ್ರಕಟಿಸಿದ “ರತ್ನಾವತಿ ಕಲ್ಯಾಣ – ಕುಮಾರ ವಿಜಯ; ಪ್ರಸಂಗ ನಡೆ – ರಂಗ ತಂತ್ರ” ಪುಸ್ತಕವನ್ನು ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರಿಂದ ಬಿಡುಗಡೆ ನೆರವೇರಿತು.

ಪೊಳಲಿ ಯಕ್ಷಗಾನ ಅರ್ಥಧಾರಿಗಳನ್ನು, ಸಾಧಕರನ್ನು, ವಿದ್ವಾಂಸರನ್ನು, ಸಾಹಿತಿಗಳನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಪುಣ್ಯ ಭೂಮಿ. ತಾಯಿ ರಾಜರಾಜೇಶ್ವರಿಯ ಸನ್ನಿಧಾನ. ಪ್ರಶಸ್ತಿ‌‌ ಪುರಸ್ಕೃತ‌ ಮಾಂಬಾಡಿಯವರು ಸಮರ್ಥ ಗುರು, ಬೋಧನಾ ವಿಧಾನದಲ್ಲಿ ಸರಳ, ಅನುಕರಣೀಯ ವಿಧಾನವನ್ನು ಅಳವಡಿಸಿಕೊಂಡು ಶಿಷ್ಯ ಸಂದೋಹವನ್ನೇ ಪಡೆದ ಗುರು ಎಂದು ಮಾಂಬಾಡಿ ಗುರುಗಳನ್ನು ಪ್ರಶಸ್ತಿ ನೀಡಿ ಸಮ್ಮಾನಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು‌.

“ರತ್ನಾವತೀ ಕಲ್ಯಾಣ ಕುಮಾರ ವಿಜಯ ಪ್ರಸಂಗ ನಡೆ – ರಂಗತಂತ್ರ” ಬಿಡುಗಡೆಗೊಳಿಸಿ ಇದೊಂದು ವಿಶಿಷ್ಟ ಯಕ್ಷಗಾನ ಸಂಬಂಧಿ ಕೃತಿ. ಇಂತಹ ಪುಸ್ತಕ ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿ ಮೊತ್ತಮೊದಲ ಪ್ರಯತ್ನ ಎಂದು ನಂದಳಿಕೆ ಮುದ್ದಣ ಪ್ರಕಾಶನ – ಅಧ್ಯಯನ ಸಂಸ್ಥೆಯ ನಂದಳಿಕೆ ಬಾಲಚಂದ್ರರಾಯರ ಪ್ರಯತ್ನವನ್ನು ಹಾಗೂ ಪರಿಶ್ರಮವನ್ನು ಶ್ಲಾಘಿಸಿದರು, ಸಂಪಾದಕ ಕೆ.ಎಲ್. ಕುಂಡಂತಾಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯಕ್ಷಗಾನದ ಹಿರಿಯ ಗುರುಗಳಾದ ಹರಿನಾರಾಯಣ ಭಟ್, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ‘ಯಕ್ಷಕಲಾ ಪೊಳಲಿ’ ಇದರ ಸಂಚಾಲಕ‌ ವೆಂಕಟೇಶ್ ನಾವಡ, ಕೆ.ಎಲ್. ಕುಂಡಂತಾಯ, ನಂದಳಿಕೆ ಪ್ರಕಾಶನ – ಅಧ್ಯಯನ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ನಂದಳಿಕೆ ಬಾಲಚಂದ್ರರಾವ್ ಹಾಗೂ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ‌‌ ಕೊಂಕಣಾಜೆ ಚಂದ್ರಶೇಖರ್ ಭಟ್ ಪ್ರಸ್ತಾವಿಸಿದರು. ಅವಿನಾಶ್ ಬೈಪಡಿತ್ತಾಯ ಸ್ವಾಗತಿಸಿದರು. ಶ್ರೀಮತಿ ಸಾಯಿ ಪಲ್ಲವಿ ನಾವಡ ಕಾರ್ಯಕ್ರಮ ನಿರ್ವಹಿಸಿದರು.

ಪುರುಷೋತ್ತಮ‌ ಭಟ್ ನಿಡುವಜೆ ಅವರು ಮಾಂಬಾಡಿ ಭಾಗವತರ ಕುರಿತು ಅವರು ಅಭಿನಂದನೆಯ ಮಾತುಗಳನ್ನಾಡಿದರು. ಶ್ರವಣ ಉಡುಪ ವಂದಿಸಿದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ

ಸಚಿವ ಜಾರಕಿಹೊಳಿ ಅವರಿಂದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ