ಉಡುಪಿ : ಯಕ್ಷಗಾನ ಕಲಾವಿದ ವಸಂತ ಭಟ್ (64) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಹಳುವಳ್ಳಿಯ ಪ್ರಸಿದ್ಧ ಸ್ತ್ರೀವೇಷಧಾರಿ ಕೃಷ್ಣಯ್ಯರ ಪುತ್ರರಾದ ಇವರು ಅಮೃತೇಶ್ವರೀ, ಬಾಳೆಹೊಳೆ ಹಾಗೂ ದೀರ್ಘಕಾಲ ಗುತ್ಯಮ್ಮ ಮೇಳದಲ್ಲಿ ವೇಷಧಾರಿಯಾಗಿ ಕಲಾಸೇವೆಗೈದಿದ್ದಾರೆ.
ದೇವೇಂದ್ರ, ಶತ್ರುಘ್ನ, ಕಮಲಭೂಪ, ಹಂಸಧ್ವಜ, ಬಲರಾಮ, ಮೊದಲಾದ ರಾಜ ವೇಷದೊಂದಿಗೆ ಬಣ್ಣದ ವೇಷ ಮಾಡಿ ಜನ ಮೆಚ್ಚುಗೆ ಗಳಿಸಿದ್ದರು. ಪ್ರಕೃತ ಗುತ್ಯಮ್ಮ ಮೇಳದ ಕಲಾವಿದರಾಗಿದ್ದ ವಸಂತ ಭಟ್ ಓರ್ವ ಸರಳ ಸಜ್ಜನಿಕೆಯ ಕಲಾವಿದರಾಗಿದ್ದರು. ಸಂಸ್ಥೆಯ ಬಗ್ಗೆ ಅತೀವ ಗೌರವಾದರಗಳನ್ನು ಹೊಂದಿದ್ದ ಇವರು ಪತ್ನಿ, ಈರ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.