Home » ಮಾಹೆಯ ವಾಗ್ಶದಿಂದ ಕುದ್ರು ನೆಸ್ಟ್‌ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ, ಸಾಂಸ್ಕೃತಿಕ ಸಂಭ್ರಮ

ಮಾಹೆಯ ವಾಗ್ಶದಿಂದ ಕುದ್ರು ನೆಸ್ಟ್‌ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ, ಸಾಂಸ್ಕೃತಿಕ ಸಂಭ್ರಮ

by NewsDesk

ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (MAHE), ಇದರ ಪ್ರತಿಷ್ಠಿತ ಘಟಕವಾದ ವೆಲ್‌ಕಮ್‌ ಗ್ರೂಪ್‌ ಗ್ರಾಜ್ಯುಯೇಟ್‌ ಸ್ಕೂಲ್‌ ಆಫ್‌ ಹೋಟೆಲ್‌ ಅಡ್ಮಿನಿಸ್ಟ್ರೇಷನ್‌ [ವಾಗ್ಶ]ನ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಸೆ. 27ರಂದು ಕುದ್ರು ನೆಸ್ಟ್‌ ಎಂಬಲ್ಲಿ ಆಚರಿಸಲಾಯಿತು. ಅಂತಿಮ ವರ್ಷದ ಬಿಎಚ್‌ಎಂ, ಬಿಎಸಿಎ ಮತ್ತು ಎಂಎಚ್‌ಎಂ ಕೌನ್ಸಿಲ್‌ ಸದಸ್ಯರಿಗಾಗಿ ಈ ಕ್ಷೇತ್ರ ಪ್ರವಾಸ ಹಮ್ಮಿಕೊಳ್ಳಲಾಗಿದ್ದು ಈ ಮೂಲಕ ಪ್ರವಾಸೋದ್ಯಮ ದಿನಾಚರಣೆಯು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

ಕುದ್ರು ನೆಸ್ಟ್‌ಗೆ ಪ್ರವೇಶಿಸಿದ ಕೂಡಲೇ ಶಿವಾಜಿ ಮಹಾರಾಜರ ಕಾಲದಲ್ಲಿ ಪ್ರಚಲಿತವಿದ್ದ ಹೋಳಿ ಕುಣಿತ ಎಂಬ ಸಾಂಪ್ರದಾಯಿಕ ನೃತ್ಯದೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಪ್ರಸಿದ್ಧ ಶೆಪ್‌, ವಾಗ್ಶದ ಪ್ರಾಂಶುಪಾಲರಾದ ಡಾ. ಕೆ. ತಿರುಜ್ಞಾನಸಂಬಂಧಂ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ಪ್ರವಾಸೋದ್ಯಮವು ಹೇಗೆ ಸಾಂಸ್ಕೃತಿಕ ಸಂಬಂಧಗಳ ವೃದ್ಧಿಗೆ ನೆರವಾಗುತ್ತದೆ’ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.

ಉಪಪ್ರಾಂಶುಪಾಲರಾದ ಡಾ. ರಾಜಶೇಖರ ಪಿ. ಮತ್ತು ರೆಸಾರ್ಟ್‌–ಹೋಮ್‌ಸ್ಟೇ ಮಾಲೀಕ, ಖ್ಯಾತ ಛಾಯಾಗ್ರಾಹಕರಾದ ರಘು ಅವರು ಉಪಸ್ಥಿತರಿದ್ದರು. ಬಿಎಚ್‌ಎಂ ಮತ್ತು ಬಿಎಸಿಎ ಇದರ ಅಧ್ಯಕ್ಷರು ಉಪನ್ಯಾಸ ನೀಡಿ ಸ್ಥಳೀಯ ಸಂಸ್ಕೃತಿಯನ್ನು ಉಳಿಸಿ ಪೋಷಿಸುವಲ್ಲಿ, ಸ್ಥಳೀಯ ಖಾದ್ಯಗಳ ತಯಾರಿಕೆಯ ಕೌಶಲವನ್ನು ಕಾಪಾಡುವಲ್ಲಿ ಇಂಥ ಕಾರ್ಯಕ್ರಮಗಳು ಸಹಕಾರಿ, ಶೈಕ್ಷಣಿಕ ಕ್ಷೇತ್ರ ಮತ್ತು ಸ್ಥಳೀಯ ಸಂಸ್ಕೃತಿಗಳ ಸಂಬಂಧವನ್ನು ವೃದ್ಧಿಸುವ ಪ್ರಯತ್ನವಾಗಿಯೂ ಇಂಥ ಕಾರ್ಯಕ್ರಮ ಮಹತ್ತವ ಪಡೆಯುತ್ತದೆ’ ಎಂಬುದನ್ನು ತಿಳಿಸಿಕೊಟ್ಟರು.

ಉದ್ಘಾಟನಾ ಸಮಾರಂಭ ಮುಗಿದ ನಂತರ ವಿದ್ಯಾರ್ಥಿಗಳು ದಕ್ಷಿಣ ಕರ್ನಾಟಕದ ಪರಂಪರೆಯಲ್ಲಿ ಬೇರೂರಿರುವ ಆಹಾರ ಅಭ್ಯಾಸಗಳು ಮತ್ತು ಕಲೆಗಳನ್ನು ಅನ್ವೇಷಿಸುವ ಅವಕಾಶವನ್ನು ಪಡೆದರು. ಕೋಳಿ ಕಾಳಗ ಹೇಗೆ ನಡೆಯುತ್ತದೆ, ಅದರ ನಿಯಮಗಳೇನು ಎಂಬ ಬಗ್ಗೆ ಅವರಿಗೆ ಶಿಕ್ಷಣ ನೀಡಲಾಯಿತು.

ಅದರ ನಂತರ ಮೀನುಗಾರಿಕೆಯ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು, ಮುಖ್ಯವಾಗಿ ಮೀನುಗಾರಿಕಾ ಗಾಳವನ್ನು ಹೇಗೆ ಬಳಸಬೇಕು, ಅದಕ್ಕೆ ಆಹಾರವನ್ನು ಅನ್ನು ಹೇಗೆ ಅಂಟಿಸಬೇಕು, ಬಳಸಬಹುದಾದ ಆಹಾರಗಳೇನು ಎಂಬಿತ್ಯಾದಿಗಳನ್ನು ತೋರಿಸಲಾಯಿತು.

ಸಿಗಡಿಯ ತುಪ್ಪದ ರೋಸ್ಟ್ ಮತ್ತು ನಾಟಿ ಕೋಳಿ ಸುಕ್ಕಾ ಮುಂತಾದ ದಕ್ಷಿಣ ಕರ್ನಾಟಕದ ವಿಶಿಷ್ಟ ಖಾದ್ಯಗಳನ್ನು ಹೇಗೆ ತಯಾರಿಸುವುದು ಮತ್ತು ಬೇಯಿಸುವುದು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಂಡರು. ಕುಡಗೋಲು ಕತ್ತಿ ಬಳಸಿ ಮಾಂಸವನ್ನು ಶುಚಿಗೊಳಿಸುವುದರಿಂದ ಅದನ್ನು ಪರಿಣಾಮಕಾರಿಯಾಗಿ ಮಸಾಲೆಗಳನ್ನು ಬಳಸಿ ಸಿದ್ಧಪಡಿಸುವುದು ಮತ್ತು ನಂತರ ಅದನ್ನು ಬೇಯಿಸುವುದನ್ನು ಕಲಿತುಕೊಂಡರು. ಶೆಫ್‌ ಅಥವಾ ಬಾಣಸಿಗರಾದ ಡಾ. ಕೆ. ತಿರು ಅವರು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಈ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು. ಬಾಣಸಿಗರಾದ ದಯಾನಂದ ಪ್ರಭು, ನಿಶ್ಚಲ್‌ ಕುಮಾರ್‌ ಮತ್ತು ಅಜಿತ್‌ ಅನಂತರಾಮ ನಾಯಕ್‌ ಸಹಕರಿಸಿದರು.

ಪಾಕಶಾಲೆಯ ಪ್ರವಾಸದ ಹೊರತಾಗಿ, ವಿದ್ಯಾರ್ಥಿಗಳು ಬುಟ್ಟಿಗಳು, ಬಿದಿರಿನ ವಸ್ತುಗಳನ್ನು ಹೆಣೆಯುವ ಕಲೆಯನ್ನು ವೀಕ್ಷಿಸಿದರು. ಅಲ್ಲದೆ, ಜಿಐ ಟ್ಯಾಗ್ ಪಡೆದ ಶಂಕರಪುರ ಮಲ್ಲಿಗೆಯನ್ನು, ಸುಂದರವಾದ ಹೂವಿನ ಮಾಲೆ ಮಾಡುವ ಕಲೆಗಳನ್ನು, ಹಲಸಿನ ಎಲೆಗಳನ್ನು ಬಳಸಿ ಸಣ್ಣ ಬುಟ್ಟಿಗಳನ್ನು ತಯಾರಿಸುವುದನ್ನು ವೀಕ್ಷಿಸಿದರು.

ಹುಲಿ ವೇಷ ಅಥವಾ ಹುಲಿ ನೃತ್ಯ ಕಾರ್ಯಕ್ರಮದ ಪ್ರಮುಖ ಅಂಗವಾಗಿತ್ತು. ಇದರಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು. ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮುಖಕ್ಕೆ ಬಣ್ಣ ಬಳಿಯುವುದರೊಂದಿಗೆ ಮತ್ತು ಲಯ ಬಡಿತ ಹಿನ್ನೆಲೆ ಸಂಗೀತಕ್ಕೆ ಹೆಜ್ಜೆ ಹಾಕಿದರು.

ವಿಶ್ವ ಪ್ರವಾಸೋದ್ಯಮ ದಿನದ ಈ ಆಚರಣೆಯು ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಲು ನೆರವಾಯಿತು. ಪ್ರವಾಸೋದ್ಯಮ ರೂಪಿಸುವ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಆಳವಾದ ತಿಳಿವಳಿಕೆ ಪಡೆಯಲು ನೆರವಾಯಿತು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb