ಉಡುಪಿ : ಡೆನ್ಮಾರ್ಕ್‌ನಲ್ಲಿ ನಡೆದ 15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅಶ್ವಿನ್ ಸನಿಲ್ ಮತ್ತು ಕುಮಟಾ ಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಮಡಿವಾಳ ಚಿನ್ನದ ಪದಕದೊಂದಿಗೆ ಭಾರತಕ್ಕೆ ಹಿಂತಿರುಗಿದ್ದಾರೆ.
ಅಶ್ವಿನ್ ಸನಿಲ್ 83 ಕೆಜಿ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ, 80 ಕೆಜಿ ಪ್ಲಸ್ ದೇಹದಾಢ್ಯ ಸ್ಪರ್ಧೆಯಲ್ಲಿ ಚಿನ್ನ,
100 ಮೀಟರ್ ಓಟ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ರಾಜೇಶ್ ಮಡಿವಾಳ 93 ಕೆಜಿ ವಿಭಾಗದ ಪವರ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ, 90 ಪ್ಲಸ್ ವಿಭಾಗದ ದೇಹದಾಢ್ಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದರು.
ಸುಮಾರು 50 ದೇಶಗಳ ಕ್ರೀಡಾ ಪ್ರತಿನಿಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಾಯ್ನಾಡು ಉಡುಪಿಗೆ ಕ್ರೀಡಾಪಟುಗಳು ಆಗಮಿಸಿದಾಗ ಹೆಜಮಾಡಿ ಟೋಲ್‌ಗೇಟ್ ಬಳಿ ಪಡುಬಿದ್ರಿ ಠಾಣೆ ಪೊಲೀಸರು ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ಕಾಪು ಹೊಸ ಮಾರಿಗುಡಿಗೆ ಆಗಮಿಸಿದ ಅವರನ್ನು ಮಾರಿಗುಡಿ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ ತಾಯಿ ಮಾರಿಯಮ್ಮನ ಪ್ರಸಾದವನ್ನು ನೀಡಿದರು.