ಈ ತರಹ ಓಡಾಡುತ್ತಿದ್ದರೆ ರಜೆ ಕೊಡಲ್ಲ – ಮಕ್ಕಳಿಗೆ ಡಿಸಿ ಗದರಿದ ವೀಡಿಯೋ ವೈರಲ್

ಮಂಗಳೂರು : ಈ ತರಹ ಓಡಾಡುತ್ತಿದ್ದರೆ ರಜೆ ಕೊಡುವುದಿಲ್ಲ. ಮಳೆಗೆ ಓಡಾಡಬಾರದು ಎಂದು ಮಕ್ಕಳ ಗುಂಪೊಂದಕ್ಕೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗದರಿದ ವೀಡಿಯೋವೊಂದು ವೈರಲ್ ಆಗುತ್ತಿದೆ.

ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ರವರು ಜಿಲ್ಲಾ ಎಸ್ಪಿ, ಜಿಪಂ ಸಿಇಒರೊಂದಿಗೆ ನಿನ್ನೆ ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು‌. ಈ ವೇಳೆ ನಾಲ್ಕು ಮಕ್ಕಳಿದ್ದ ಗುಂಪೊಂದು ಇದನ್ನು ವೀಕ್ಷಿಸುತ್ತಿತ್ತು‌. ಆಗ ಡಿಸಿಯವರು ಈ ತರಹ ಓಡಾಡುತ್ತಿದ್ದರೆ ರಜೆ ಕೊಡುವುದಿಲ್ಲ. ಮಳೆಗೆ ಓಡಾಡಬಾರದು ಎಂದಿದ್ದಾರೆ. ಈ ವೇಳೆ ಅವರಲ್ಲೋರ್ವ ಹುಡುಗ “ನಾಳೆ ಮತ್ತೆ ರಜೆಯಾ” ಎಂದು ಡಿಸಿಯವರನ್ನೇ ಪ್ರಶ್ನಿಸಿದ್ದಾನೆ. ಆಗ ಅಲ್ಲಿ ನಗೆಗಡಲು ತೇಲಿ ಬಂದಿದೆ. ವಿದ್ಯಾರ್ಥಿಯ ಈ ಮಾತಿನಿಂದ ಮುಗುಳ್ನಕ್ಕ ಡಿಸಿಯವರು ಹುಡುಗನ ಬೆನ್ನು ತಟ್ಟಿ ಮುಂದೆ ಹೋಗಿದ್ದಾರೆ.

ಎರಡು ಹೆಜ್ಜೆ ಮುಂದಿಟ್ಟು ಹಿಂದಿರುಗಿದ ಡಿಸಿಯವರು “ಎಲ್ಲಿ ಸ್ಕೂಲ್?” ಎಂದು ಪ್ರಶ್ನಿಸಿದ್ದಾರೆ. ಆಗ ಮಕ್ಕಳು ಗೂಡಿನ ಬಳಿ ಎಂದು ಹೇಳುತ್ತಾರೆ. ಇದೀಗ ಈ ವೀಡಿಯೋ ಭಾರೀ ವೈರಲ್ ಆಗಿದೆ. ಕಳೆದ ಬಾರಿಯ ಮಳೆಯ ಸಂದರ್ಭದಲ್ಲಿ “ಮಕ್ಕಳು ದಿನಾ ಬೆಳಗ್ಗೆ ಕರೆ ಮಾಡಿ ಇವತ್ತು ರಜೆ ಇದೆಯಾ?” ಎಂದು ಕೇಳುತ್ತಾರೆ ಎಂದು ಡಿಸಿ ಮುಲ್ಲೈ ಮುಗಿಲನ್ ಹೇಳಿದ್ದ ವೀಡಿಯೋ ಭಾರೀ ವೈರಲ್ ಆಗಿತ್ತು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ