ವಾಮಾಚಾರ ಪ್ರಕರಣ – ಪ್ರಸಾದ್ ಅತ್ತಾವರ, ಆತನ ಪತ್ನಿ ತನಿಖೆಗೆ ಸಹಕರಿಸುತ್ತಿಲ್ಲ : ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್‌

ಮಂಗಳೂರು : ಮೈಸೂರಿನ ‘ಮುಡಾ’ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್‌ಟಿಐ ಕಾರ್ಯಕರ್ತ ಗಂಗರಾಜು ಫೋಟೋಗಳಿಗೆ ವಾಮಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ರಾಮಸೇನೆ ಸ್ಥಾಪಕ ಪ್ರಸಾದ್ ಅತ್ತಾವರ ಮತ್ತು ಆತನ ಪತ್ನಿ, ಉಡುಪಿಯಲ್ಲಿ ಸಬ್‌ಇನ್ ಸ್ಪೆಕ್ಟರ್ ಆಗಿರುವ ಸುಮಾ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿರುವ ಪೊಲೀಸ್ ಆಯುಕ್ತರು, ತನಿಖೆಗೆ ಸಂಬಂಧಿಸಿ ಪ್ರಸಾದ್ ಅತ್ತಾವರ ಮತ್ತು ಆತನ ಪತ್ನಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಆದರೆ ಅವರಿಬ್ಬರೂ ತನಿಖೆಗೆ ಸಹಕರಿಸುತ್ತಿಲ್ಲ. ಮತ್ತೊಮ್ಮೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಹೃದಯ ಕಾಯಿಲೆ ಇದೆ ಎಂದು ಹೇಳಿ ಪ್ರಸಾದ್ ಅತ್ತಾವರ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯಲ್ಲಿರುವಾಗ ವಿಚಾರಣೆ ನಡೆಸಲಾಗಿತ್ತು. ಬಳಿಕ ಆತ ಜಾಮೀನು ಪಡೆದುಕೊಂಡು ಬೇರೆ ಕಡೆ ತಿರುಗಾಡುತ್ತಿದ್ದಾನೆ ಎಂದರು.

ಪ್ರಸಾದ್ ಅತ್ತಾವರ ಬಳಸಿರುವ ಸೊತ್ತುಗಳ ವಿಧಿವಿಜ್ಞಾನ ವಿಶ್ಲೇಷಣೆ ಮಾಡಲಾಗುತ್ತಿದೆ.

ಬಿಜೈಯ ಯುನಿಸೆಕ್ಸ್ ಸೆಲೂನ್ ಒಂದರಲ್ಲಿ ಜ.23ರಂದು ನಡೆದ ದಾಂಧಲೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರನ ಮೊಬೈಲ್ ಫೋನ್ ಪರಿಶೀಲನೆ ವೇಳೆ ದೇವಸ್ಥಾನವೊಂದರಲ್ಲಿ ಐದು ಕುರಿಗಳನ್ನು ಬಲಿ ಕೊಟ್ಟು ಅದರ ರಕ್ತವನ್ನು ಸ್ನೇಹಮಯಿ ಕೃಷ್ಣ ಮತ್ತು ಇತರ ಕೆಲವರ ಫೋಟೋಗಳಿಗೆ ಹಾಗೂ ಅವರ ಹೆಸರಿನ ಚೀಟಿಗೆ ಹಚ್ಚಿ ಪೂಜೆ ಮಾಡುತ್ತಿರುವ ವೀಡಿಯೋ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Related posts

ನಿಯಮ ಮೀರಿ ಸರಕಾರಿ ಜಮೀನಿನಲ್ಲಿ ಕಾಮಗಾರಿ : ತಹಶೀಲ್ದಾರ್‌ರಿಂದ ತಡೆ

ಬಾಲಕ ನಾಪತ್ತೆ ಪ್ರಕರಣ – ಶನಿವಾರ ಫರಂಗಿಪೇಟೆ ಬಂದ್‌ಗೆ ಕರೆ…

ಖೋಟಾ ನೋಟು ಚಲಾವಣೆ : ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿ ಅರೆಸ್ಟ್