ಮಂಗಳೂರು : ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರ ಸಂಸತ್ತಿನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದೆ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಶಾಸಕ ಡಾ. ಭರತ್ ಶೆಟ್ಟಿ ಬಿಜೆಪಿಗರಿಂದ ಹಿಂದೂ ಧರ್ಮಕ್ಕಾದ ಅವಮಾನಗಳಿಗೇಕೆ ತುಟಿಬಿಚ್ಚದೆ ಮೌನವಾಗಿದ್ದಾರೆ. ಸಾಧ್ಯವಾದರೆ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಕೆಪಿಸಿಸಿ ವಕ್ತಾರ ಎ.ಸಿ.ವಿನಯರಾಜ್ ಸವಾಲೆಸೆದಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಭರತ್ ಶೆಟ್ಟಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿರುವ ವಿನಯರಾಜ್, ಪರಶುರಾಮನ ಕಂಚಿನ ಮೂರ್ತಿಯೆಂದು ಆಗಿನ ಬಿಜೆಪಿ ಸಚಿವ ಸುನಿಲ್ ಕುಮಾರ್ ಫೈಬರ್ ಮೂರ್ತಿ ಸ್ಥಾಪಿಸಿ ಮೋಸ ಮಾಡಿದಾಗ ಹಿಂದೂಗಳ ಭಾವನೆಗೆ ಧಕ್ಕೆಯಾಗಲಿಲ್ಲವೇ? ಶಿವದೂತ ಗುಳಿಗ ದೈವವನ್ನು ಬಿಜೆಪಿಯ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಗುಳಿಗೆ ಎಂದರೆ ನಮ್ಮ ಕಡೆ ಮಾತ್ರೆ ಎಂದು ಅವಹೇಳನ ಮಾಡಿದಾಗ ಭರತ್ ಶೆಟ್ಟಿಯವರು ನಾಲಗೆ ಯಾಕೆ ಹರಿಬಿಟ್ಟಲ್ಲ ಎಂದು ಪ್ರಶ್ನಿಸಿದರು.
ಸ್ಪೀಕರ್ ಯು.ಟಿ.ಖಾದರ್ ತುಳುಭಾಷೆಯನ್ನು ತುಳನಾಡಿನ “ದೈವಗಳು ಮಾತನಾಡುವ ಭಾಷೆ” ಎಂದಾಗ ಬಿಜೆಪಿ ಮಂತ್ರಿ ಮಾಧುಸ್ವಾಮಿ ‘ನಿಮ್ಮ ಕಡೆ ದೈವಗಳು ಮಾತನಾಡುತ್ತವೆಯೇ?’ ಎಂದು ತಮಾಷೆ ಮಾಡಿದಾಗ ಯಾಕೆ ಮಾತನಾಡಿಲ್ಲ? ಯಕ್ಷಗಾನದಲ್ಲಿ ಗಣಪತಿ ದೇವರ ಬಗ್ಗೆ ತಮಾಷೆ ಮಾಡಿದಾಗ ಚಕಾರವೆತ್ತಿಲ್ಲ. ಕೊರೋನ ವೇಳೆ ವಾಮಂಜೂರು ಸ್ಮಶಾನದಲ್ಲಿ ಹಿಂದೂ ಮಹಿಳೆಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದಾಗ ಡಾ. ಭರತ್ ಶೆಟ್ಟಿಯವರಿಗೆ ಮರೆತುಹೋದ ಹಿಂದೂಗಳ ಕಾಳಜಿ ಈಗ ನೆನಪಿಗೆ ಬಂತೇ ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯೆಯಿಂದಲೇ ಕದ್ರಿ ದೇವಸ್ಥಾನದ ಹುಂಡಿಹಣ ಕಳವಾಗಿದೆ ಎಂಬ ಆರೋಪ ಬಂದಾಗ, ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶಿಸಲು ತಡೆದಾಗ, ನಾರಾಯಣ ಗುರುಗಳ ಪಠ್ಯವನ್ನು ಪಠ್ಯಪುಸ್ತಕದಿಂದ ಕಿತ್ತೆಸೆದಾಗ ಯಾಕೆ ಮಾತನಾಡಿಲ್ಲ. ಹಿಂದೂ ಶಾಸಕನಾಗಿ ಇವರು ತಮ್ಮ ಸಂಸ್ಕೃತಿಯನ್ನು ಮರೆತಂತಿದೆ. ಶಸ್ತ್ರಾಸ್ತ್ರ ಹಿಡಿಯಬೇಕೆಂದು ಹಿಂದೂ ಯುವಕರ ದಾರಿ ತಪ್ಪಿಸುವ ಕೆಲಸವನ್ನು ಭರತ್ ಶೆಟ್ಟಿ ಮಾಡುತ್ತಿದ್ದಾರೆ. ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸಲೆತ್ನಿಸುವ ನೀವು ಜನಪ್ರತಿನಿಧಿಯಾಗಲು ನಾಲಾಯಕ್ ಮನುಷ್ಯ ಎಂದು ವಿನಯ್‌ರಾಜ್ ಕಿಡಿಕಾರಿದರು.