10 ಕೋಟಿ ರೂ. ವೆಚ್ಚದಲ್ಲಿ ವೆನ್‌ಲಾಕ್ ಆಸ್ಪತ್ರೆ ನವೀಕರಣ ಕಾಮಗಾರಿ : ದಿನೇಶ್ ಗುಂಡೂರಾವ್

ಮಂಗಳೂರು : ವೆನ್‌ಲಾಕ್‌ನಲ್ಲಿ ಅಗತ್ಯ ಹೊಸ ಕಟ್ಟಡಗಳೊಂದಿಗೆ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಬಗ್ಗೆ ಜನವರಿಯೊಳಗೆ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಶನಿವಾರ ಲೇಡಿಗೋಶನ್ ಆಸ್ಪತ್ರೆಯ ವಿನೂತನ ಸೌಲಭ್ಯಗಳನ್ನು ವೀಕ್ಷಿಸಿದ ಬಳಿಕ ವೆನ್‌ಲಾಕ್ ಆಸ್ಪತ್ರೆ ಸೇರಿದಂತೆ ಪ್ರಗತಿ ಪರಿಶೀಲನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವೆನ್‌ಲಾಕ್ ಆಸ್ಪತ್ರೆಯ ಶವಾಗಾರ ಕಟ್ಟಡ, ಪ್ಯಾರಾ ಮೆಡಿಕಲ್ ಕಾಲೇಜು ಕಟ್ಟಡ, ಪೋಸ್ಟ್ ಮಾರ್ಟಂ ಕೊಠಡಿ ನಿರ್ಮಾಣ, ಅಡುಗೆ ಕೋಣೆ ನಿರ್ಮಾಣ, ಎರಡು ಕಟ್ಟಡಗಳನ್ನು ಸಂಪರ್ಕಿಸುವ ಸೇತುವೆಯ ಪುನರ್ ನಿರ್ಮಾಣ ಸೇರಿದಂತೆ ಅಂದಾಜು ಮೂಲ ಕಾಮಗಾರಿಗಳಿಗೆ ವಿವಿಧ ಸಂಸ್ಥೆಗಳ ಸಿಎಸ್‌ಆರ್ ಫಂಡ್‌ನಿಂದ ಪಡೆಯುವ ಜತೆಗೆ ಇಲಾಖೆಯಿಂದಲೂ ಅನುದಾನ ಒದಗಿಸಿ ಕ್ರಮ ವಹಿಸಲಾಗುವುದು. ಮುಂದಿನ ವಾರ ಅಧಿಕಾರಿಗಳು ಬೆಂಗಳೂರಿನಲ್ಲಿ ಮಾಹಿತಿಯನ್ನು ನೀಡಿದರೆ ಯಾವ ಹಂತದಲ್ಲಿ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಎಂಬುದನ್ನು ನಿರ್ಧರಿಸಲಾಗುವುದು. ಲೇಡಿಗೋಶನ್ ಸೌಲಭ್ಯಗಳು ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತಿದೆ ಎಂದವರು ಹೇಳಿದರು.

ರಾಜ್ಯದಲ್ಲಿ ಡೇ ಕೇರ್ ಕಿಮೋ ತೆರಪಿ ಸೆಂಟರ್ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ತೆರೆಯಲಾಗುತ್ತಿದ್ದು, ವೆನ್‌ಲಾಕ್ ಆಸ್ಪತ್ರೆ‌ಯಲ್ಲೂ ಈ ಸೌಲಭ್ಯ ಲಭ್ಯವಾಗಲಿದೆ. ಈ ಸೆಂಟರ್‌ನಲ್ಲಿ ಬೆಳಗ್ಗಿನಿಂದ ಸಂಜೆಯ ಅವಧಿಯಲ್ಲಿ ಕಿಮೋತೆರಪಿ ಸೌಲಭ್ಯ ಪಡೆ‌ಯುವ ನಿಟ್ಟಿನಲ್ಲಿ 10 ಬೆಡ್ ಸೌಲಭ್ಯಗಳ ಕೇಂದ್ರ ಆರಂಭಗೊಳ್ಳಲಿದೆ. ಜಿಲ್ಲಾಸ್ಪತ್ರೆಗಳಲ್ಲಿ ಆಂಕಾಲಜಿಸ್ಟ್‌ಗಳು ಇಲ್ಲದ ಕಾರಣ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರವನ್ನು ಪಡೆಯಲಾಗುತ್ತಿದ್ದು, ವೆನ್‌ಲಾಕ್‌ನಲ್ಲಿ ಯೇನೆಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ಸೆಂಟರ್ ಕಾರ್ಯಾಚರಿಸಲಿದೆ. ಈ ಬಗ್ಗೆ ಸಿದ್ಧತೆ ನಡೆದಿದ್ದು, ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಯವರು ಈ ಸೌಲಭ್ಯವನ್ನು ರಾಜ್ಯವ್ಯಾಪಿಯಾಗಿ ಉದ್ಘಾಟಿಸಲಿದ್ದಾರೆ ಎಂದವರು ಹೇಳಿದರು.

ವೆನ್‌ಲಾಕ್‌ನಲ್ಲಿ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್‌ಗೆ ಬರುವ ಬಿಪಿಎಲ್ ರೋಗಿಗಳಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಇದೆ. ಈ ಸೌಲಭ್ಯ ಉಚಿತವಾಗಿ ರೋಗಿಗಳಿಗೆ ನೀಡಬೇಕಾಗಿದ್ದು, ಇಲ್ಲಿ ಯಾಕೆ ಈ ತರ ಮಾಡಾಗುತ್ತಿದೆ ಎಂಬ ಬಗ್ಗೆ ಮಾತನಾಡಿದ್ದೇನೆ. ಎಚ್‌ಎಎಲ್‌ನವರು ಇಲ್ಲಿ ಈ ಎಂಆರ್‌ಐ ಯಂತ್ರಗಳನ್ನು ನಿರ್ವಹಣೆ ಮಾಡುತ್ತಿರುವುದರಿಂದ ಈ ಗೊಂದಲ ಇದೆ ಎನ್ನಲಾಗಿದ್ದು, ಉಚಿತವಾಗಿ ನೀಡಲು ಸಾಧ್ಯವಾಗದಿದ್ದರೆ ಅವರ ಸೌಲಭ್ಯವನ್ನು ರದ್ದುಪಡಿಸಿ ನಾವೇ ಹೊಸ ಯಂತ್ರವನ್ನು ತರಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು