ಸುರಂಗದೊಳಗೆ ನೀರು-ಕೊಂಕಣ ರೈಲು ಸಂಚಾರ ವ್ಯತ್ಯಯ, ಹಲವು ರೈಲುಗಳ ಸಂಚಾರ ರದ್ದು

ಉಡುಪಿ : ಕೊಂಕಣ ರೈಲು ಮಾರ್ಗದ ಕಾರವಾರ ವಲಯದ ಮಧುರೆ-ಪೆರ್ನೆಮ್ ವಿಭಾಗದ ಪೆರ್ನೆಮ್ ಸುರಂಗ ಮಾರ್ಗದಲ್ಲಿ ಮಂಗಳವಾರ ಅಪರಾಹ್ನದ ವೇಳೆಗೆ ಕಾಣಿಸಿಕೊಂಡ ಮಳೆ ನೀರಿನ ಸೋರಿಕೆ, ದುರಸ್ತಿಯ ಹೊರತಾಗಿಯೂ ಇಂದು ಮುಂಜಾನೆ 2:19ರ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಮತ್ತೆ ಸೋರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ.

ಹೀಗಾಗಿ ಇಂದು ಮುಂಜಾನೆಯಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಸಾಕಷ್ಟು ರೈಲುಗಳ ಪ್ರಯಾಣವನ್ನು ರದ್ದುಗೊಳಿಸಿದ್ದರೆ, ದೂರ ಪ್ರಯಾಣದ ರೈಲುಗಳ ಸಂಚಾರದ ಮಾರ್ಗವನ್ನು ಬದಲಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿವೆ.

ಮಂಗಳವಾರ ಅಪರಾಹ್ನ 2:30ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಮಳೆಯ ಕೆಸರು ನೀರಿನ ಸೋರಿಕೆಯನ್ನು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ತಂತ್ರಜ್ಞರು ದುರಸ್ಥಿಗೊಳಿಸಿದ್ದು, ರಾತ್ರಿ 10:10ರ ಸುಮಾರಿಗೆ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಇಂದು ಮುಂಜಾನೆ ದೊಡ್ಡ ಪ್ರಮಾಣದಲ್ಲಿ ಕೆಸರು ನೀರು ರೈಲು ಹಳಿಗಳ ಮೇಲೆ ಬೀಳಲಾರಂಭಿಸಿದ ಬಳಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಇದೀಗ ಗೋವಾ ಹಾಗೂ ಮುಂಬೈಯಿಂದ ಆಗಮಿಸಿದ ತಂತ್ರಜ್ಞರು, ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ದುರಸ್ಥಿ ಕಾರ್ಯ ಭರದಿಂದ ನಡೆಯುತಿದ್ದು, ಇಂದು ರಾತ್ರಿ 8-9 ಗಂಟೆಯ ಸುಮಾರಿಗೆ ಇದು ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ ಎಂದು ಕೊಂಕಣ ರೈಲ್ವೆಯ ಮೂಲಗಳು ತಿಳಿಸಿವೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ