ಏತ ನೀರಾವರಿ ಯೋಜನೆ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಂದ ಆಗ್ರಹ : ಸಭೆಯಲ್ಲಿ ಮಾತಿನ ಚಕಮಕಿ – ಶಾಸಕರ ಮಧ್ಯ ಪ್ರವೇಶದಲ್ಲಿ ಸುಖಾಂತ್ಯ

ಕುಂದಾಪುರ : ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರಂಜಾಲು ಏತನೀರಾವರಿ ಯೋಜನೆ ವೈಫಲ್ಯ, ಸ್ಥಳೀಯ ರೈತರಿಗೆ ಆಗುತ್ತಿರುವ ತೊಂದರೆ ಕುರಿತು ಹೇರಂಜಾಲು ಶ್ರೀ ದುರ್ಗಾ ಗಣೇಶೋತ್ಸವ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಎರಡು ತಂಡಗಳ ನಡುವೆ ತಳ್ಳಾಟ, ನೂಕಾಟ ನಡೆದು ಒಂದಿಷ್ಟ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಕಾಲದಲ್ಲಿ ಆರಕ್ಷಕ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿ ಸಭೆ ಮುಂದುವರಿಕೆಗೆ ಅವಕಾಶ ಮಾಡಿಕೊಟ್ಟರು.

ಏತ ನೀರಾವರಿ ಯೋಜನೆ ಇಲ್ಲಿ ಅವೈಜ್ಞಾನಿಕವಾಗಿ ಆಗುತ್ತಿದ್ದು ಸ್ಥಳೀಯ ರೈತರಿಗೆ ಇದರಿಂದ ತೊಂದರೆಯಾಗುತ್ತಿದೆ ಎನ್ನುವ ಕುರಿತು ಒಂದು ತಂಡ ಅಧಿಕಾರಿಗಳ ಮುಂದೆ ವಾದ ಮಂಡಿಸಿದರೆ ಇನ್ನೊಂದು ತಂಡ ಇದನ್ನು ವಿರೋಧಿಸಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ರೈತ ಮುಖಂಡರಾದ ಎಸ್.ಪ್ರಕಾಶ್ಚಂದ್ರ ಶೆಟ್ಟರ ಮೈಕ್ ಕಸಿದುಕೊಂಡು ಎಳೆದಾಡಿದ ಘಟನೆ ನಡೆಯಿತು.

ಇಲ್ಲಿ ಆಗುತ್ತಿರುವ ಅಣೆಕಟ್ಟು ಹಾಗೂ ಜ್ಯಾಕ್‍ವೆಲ್ ಅವೈಜ್ಞಾನಿವಾಗಿದ್ದು, ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಗ್ರಾಮ ಪಂಚಾಯತ್‍ಗೆ 15 ದಿನಗಳ ಹಿಂದೆ ಮಾಹಿತಿ ನೀಡಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಈ ಬಗ್ಗೆ ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಷ್ಟು ದೊಡ್ಡ ಯೋಜನೆ ಆಗುತ್ತಿದ್ದರೂ ಕೂಡಾ ಎಲ್ಲಿಯೂ ಕೂಡಾ ಒಂದು ಬೋರ್ಡ್ ಸಹ ಹಾಕಿಲ್ಲ. ಅಣೆಕಟ್ಟುವಿನ ನೀರಿನ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈಗಾಗಲೇ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡಿಲ್ಲ. 1ಸಾವಿರ ಎಕ್ರೆ ಹಿಂಗಾರು ಹಂಗಾಮಿ ಭತ್ತ ಬೇಸಾಯ ಮಾಡುವವರು ಇಲ್ಲಿ ಇದ್ದಾರೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ, ಸರ್ವೇ ಆಗಿಲ್ಲ, ನೀರು ನಿರ್ವಹಣೆ ಸಮಿತಿ ರಚನೆ ಮಾಡಿಲ್ಲ, ನೀರು ತುಂಬಿದಾಗ ನದಿ ಬದುಗಳನ್ನು ಮಣ್ಣಿನ ಕಟ್ಟು ಕಟ್ಟಿ ಏರಿಸುವುದಾಗಿ ಹೇಳುತ್ತಾರೆ. ನೀರು ಮೇಲ್ಭಾಗದಲ್ಲಿ ತುಂಬಿರುವಾಗ ತಗ್ಗು ಪ್ರದೇಶದಲ್ಲಿರುವ ಗದ್ದೆಗೆ ನೀರಿನ ಉಜುರು ಬರುತ್ತದೆ. ಇದು ಸಾಮಾನ್ಯ ಜನರಿಗೂ ಗೊತ್ತಿದೆ. ಅಧಿಕಾರಿಗಳು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು.

ಯೋಜನೆಯ ಪ್ರದೇಶದ ರೈತರಿಗೆ ಯಾವುದೇ ತೊಂದರೆಯಾಗಬಾರದು, ಏತನೀರಾವರಿ ಯೋಜನೆಯ ಪಾತ್ರದ ಗದ್ದೆಗಳಿಗೆ ನೀರು ನುಸುಳದಂತೆ ಕ್ರಮ ಕೈಗೊಳ್ಳಬೇಕು, ಬೆಳೆಹಾನಿಯಾದ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು, ಅಚ್ಚುಕಟ್ಟು ಪ್ರದೇಶದ ಎಲ್ಲಾ ಭತ್ತ ಬೇಸಾಯಗಾರರಿಗೆ ಸೆಸ್ ಹಾಕುವುದಿಲ್ಲ ಎಂದು ಮೇಲಾಧಿಕಾರಿಗಳು ಲಿಖಿತ ರೂಪದಲ್ಲಿ ನೀಡಬೇಕು, ಜಾಕ್‍ವೆಲ್ ಕೆಳಭಾಗದಲ್ಲಿ ಹಾಕಬೇಕು, ಮೇಲಾಧಿಕಾರಿಗಳು ಬಂದು ಸರಿಯಾದ ಮಾಹಿತಿ ನೀಡುವ ತನಕ ಕಾಮಗಾರಿ ನಡೆಸಲು ಅವಕಾಶ ನೀಡಬಾರದು ಎಂದು ಅವರು ಅಧಿಕಾರಿಗಳನ್ನು ಆಗ್ರಹಿಸಿದರು.

ಈ ಸಂದರ್ಭ ಆಗಮಿಸಿದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಸುಮಾರು 70 ಕೋಟಿ ರೂಪಾಯಿಯ ದೊಡ್ಡ ಯೋಜನೆ ಈ ಗ್ರಾಮಕ್ಕೆ ಬಂದಿದೆ. ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಸರಕಾರದ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಾಟುಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಗ್ರಾಮಸ್ಥರು ತಮ್ಮ ಹಕ್ಕು ಕೇಳುತ್ತಾರೆ, ಅಧಿಕಾರಿಗಳು ವಾದ ಮಾಡದೆ ಅವರಿಗೆ ಅನುಕೂಲವಾಗುವಂತೆ, ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ನಾವೀಗ ಸಾಕಷ್ಟು ದೂರ ಬಂದಾಗಿದೆ. ಇಷ್ಟರೊಳಗೆ ನಮ್ಮ ಸಮಸ್ಯೆಯನ್ನು ತಿಳಿಸಬೇಕಾಗಿತ್ತು. ಈಗಲೂ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಯನ್ನು ಗಮನಿಸಬೇಕು. ನಾಗರಿಕರ ಸಮಿತಿ ರಚನೆ ಮಾಡಬೇಕು, ರೈತರ ಸಭೆ ಕರೆಯಬೇಕು ಎಂದು ಹೇಳಿದ ಅವರು, ಇಲ್ಲಿ ಆಗಬೇಕಾದ ವಿಷಯದ ಬಗ್ಗೆ ಗ್ರಾಮದ ಪ್ರಮುಖರು, ಅಧಿಕಾರಿಗಳ ಸಭೆ ನಡೆಸಿ, ತೀರ್ಮಾನ ತಗೆದುಕೊಳ್ಳೊಣ ಎಂದರು.

Related posts

ಕ್ಯಾನ್ಸರ್ ಜಾಗೃತಿಗಾಗಿ 3ಡಿ ಕಲಾಕೃತಿ ಅನಾವರಣ

ಗಣೇಶ್ ಬೋಜ ಕರ್ಕೇರರವರಿಂದ ಆರೋಗ್ಯ ಇಲಾಖೆಗೆ ಜಾಗ ದಾನ

ಸಾದ್ವಿ ಸರಸ್ವತಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ, ದೇವರ ದರ್ಶನ