ವಿಧಾನಪರಿಷತ್ ಚುನಾವಣೆ : 1600‌ಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು

ಮಂಗಳೂರು : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ 1600 ಅಧಿಕ‌ ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಮಂಗಳೂರಿನ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನೆರವೇರಿತು.

ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಬಳಿಕ, ದಕ್ಷಿಣ ಕನ್ನಡದಲ್ಲಿ ತೆರವಾದ ವಿಧಾನಪರಿಷತ್ ಸ್ಥಾನಕ್ಕೆ ಅ. 21ರಂದು ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಕಿಶೋರ್ ಕುಮಾರ್ ತಮ್ಮ ಮುಖ್ಯ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ರಾಜು ಪೂಜಾರಿ ವಿರುದ್ಧ ಗೆಲುವು ಸಾಧಿಸಿದರು.

ಒಟ್ಟು 5,906 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, 12 ಮೇಜುಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆದಿದೆ. ಪ್ರತಿ ಮೇಜಿಗೆ ಕಣ್ಕಾವಲು ಮತ್ತು ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಿಶ್ರಣ ಮತ್ತು ಸಿಂಧುತ್ವ ಪರಿಶೀಲನೆಯ ನಂತರ, ಮೊದಲ ಪ್ರಾಶಸ್ತ್ಯದ ಮತಗಳ ಅಂತಿಮ ಎಣಿಕೆ ನಡೆಸಲಾಯಿತು.

ಈ ಚುನಾವಣೆಯಲ್ಲಿ ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದ್ದರು – ಬಿಜೆಪಿ‌ನ ಕಿಶೋರ್ ಕುಮಾರ್, ಕಾಂಗ್ರೆಸ್‌ನ ರಾಜು ಪೂಜಾರಿ, ಎಸ್‌ಡಿಪಿಐನ ಅನ್ವರ್ ಸಾದತ್, ಮತ್ತು ಪಕ್ಷೇತರ ದಿನಕರ ಉಳ್ಳಾಲ್. ಈ ಕ್ಷೇತ್ರವು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆ ಮತ್ತು ಶಾಸಕರು ಈ ಕ್ಷೇತ್ರದ ಮತದಾರರಾಗಿದ್ದರು.

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಗೆಲುವು ಸಾಧಿಸಿರುವುದರಿಂದ, ಅವರು ದಕ್ಷಿಣ ಕನ್ನಡದ ಹೊಸ ಪರಿಷತ್ ಸದಸ್ಯರಾಗಿ ಆಯ್ಕೆಯಾದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !