ಹಿರಿಯ ಪತ್ರಕರ್ತರಾದ ಬಿ.ಬಿ. ಶೆಟ್ಟಿಗಾರ್‌ಗೆ ಪತ್ರಿಕಾ ದಿನಾಚರಣೆಯ ಗೌರವ

ಉಡುಪಿ : ಉಡುಪಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ 2024ರ ಜು.22ರಂದು ಕಾಲೇಜಿನಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆಯಲ್ಲಿ ಗೌರವವನ್ನು ಸ್ವೀಕರಿಸಿದ ಉಡುಪಿಯ ಹಿರಿಯ ಪತ್ರಕರ್ತರ ಬಿ.ಬಿ. ಶೆಟ್ಟಿಗಾರ್(ಬಸ್ತಿ ಬಾಬುರಾಯ್ ಶೆಟ್ಟಿಗಾರ್) ಅವರ ಕಿರು ಪರಿಚಯ ಇಲ್ಲಿದೆ.

ಪತ್ರಿಕೆ, ಪತ್ರಿಕೋದ್ಯಮ, ಜಿಲ್ಲೆಯ ಸಮಗ್ರ ಮಾಹಿತಿ, ದೇಶ, ವಿದೇಶಗಳ ರಾಜಕೀಯ, ಪ್ರಸ್ತುತ ವಿದ್ಯಾಮಾನಗಳ ಕುರಿತಾದ ಚರ್ಚೆ ಎದುರಾದಾಗ ನೆನಪಿಗೆ ಬರುವುದು ಬಿ.ಬಿ. ಶೆಟ್ಟಿಗಾರ್. ಇವರ ಜ್ಞಾನ ಭಂಡಾರ ಅಷ್ಟೊಂದು ಅಗಾಧ. ಕಳೆದ 4 ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ಬಿ.ಬಿ. ಶೆಟ್ಟಿಗಾರ್ ಪತ್ರಿಕೋದ್ಯಮದ ಏಳುಬೀಳುಗಳನ್ನು ಕಂಡು ಸವಾಲುಗಳನ್ನು ಎದುರಿಸಿ ಬೆಳೆದವರು.

ಬಡಗತಿಟ್ಟು ಯಕ್ಷಗಾನದಲ್ಲಿ ಬಳಕೆಯಾಗುವ ಯಕ್ಷಗಾನ ಕಸೆ ಸೀರೆ ನೇಯಿಗೆಯಲ್ಲಿ ಪ್ರಪ್ರಥಮ ಬಾರಿಗೆ ಕೈಮಗ್ಗ ನೇಕಾರರಿಗೆ ಸಿಕ್ಕ ಮೊದಲ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ದಿ.ಬಿ.ಮಂಜುನಾಥ ಶೆಟ್ಟಿಗಾರ್ ಅವರ ಪುತ್ರರಾಗಿ ಜನಿಸಿದ ಇವರು ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನಲ್ಲಿ ತನ್ನ ಶಿಕ್ಷಣವನ್ನು ಮುಗಿಸಿ, ಮೈಸೂರಿನ ಕಾಲೇಜಿನಲ್ಲಿ ಇ ಆ್ಯಂಡ್ ಸಿ ಎಂಜಿನಿಯರಿಂಗ್ ಶಿಕ್ಷಣವನ್ನು ಪಡೆದಿದ್ದರು.

ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮುಂದಾಳತ್ವದಲ್ಲಿ 1985ರಲ್ಲಿ ಮಂಗಳೂರಿನಲ್ಲಿ ಆರಂಭಗೊಂಡ ಮುಂಗಾರು ಪತ್ರಿಕೆಯಲ್ಲಿ ವೃತ್ತಿ ಬದುಕಿಗೆ ಪಾದಾರ್ಪಣೆಗೈದರು. ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಗರಡಿಯಲ್ಲಿ ಪಾಳಗಿದ್ದ ಇವರು, ಮುಂಗಾರು ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ, ನಂತರ ಕ್ರೀಡಾ ಸಂಪಾದಕರಾಗಿ, ಪುರವಣಿ ಸಂಪಾದಕರಾಗಿ ಸುಮಾರು ಒಂದು ದಶಕಗಳ ಕಾಲ ಮುಂಗಾರು ಪತ್ರಿಕೆಯಲ್ಲಿ ವೃತ್ತಿ ಜೀವನ ನಡೆಸಿದ್ದರು.

ಬಿ.ವಿ. ಸೀತಾರಾಮ ಸಂಪಾದಕತ್ವದ ಕನ್ನಡ ಜನ ಅಂತರಂಗ ಪತ್ರಿಕೆಯಲ್ಲಿ ಸುಮಾರು 6 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದರು. 1995ರಲ್ಲಿ ಮಂಗಳೂರಿನಲ್ಲಿ ಜನಮಾಧ್ಯಮ ಸಂಸ್ಥೆ ಬಾಲಕೃಷ್ಣ ಗಟ್ಟಿ ಅವರ ಸಂಪಾದಕತ್ವದಲ್ಲಿ ಹೊಸದಾಗಿ ಆರಂಭಗೊಂಡ ಜನವಾಹಿನಿ ಪತ್ರಿಕೆಯಲ್ಲಿ ಕ್ರೀಡಾ ಸಂಪಾದಕರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸಿದ್ದರು. ಬಳಿಕ ಇವರು 2001ರಲ್ಲಿ ಪತ್ರಿಕೆಯ ಉಡುಪಿ ಬ್ಯೂರೋ ಮುಖ್ಯಸ್ಥರಾಗಿ ನೇಮಕಗೊಂಡು ಉಡುಪಿಗೆ ನಿಯುಕ್ತಿಗೊಂಡಿದ್ದರು.

2004ರಲ್ಲಿ ವಾರ್ತಾಭಾರತಿ ಪತ್ರಿಕೆಗೆ ಸೇರ್ಪಡೆಗೊಂಡ ಇವರು ಕಳೆದ ಎರಡು ದಶಕಗಳಿಂದ ಉಡುಪಿ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದ ಆರಂಭದಲ್ಲಿದ್ದ ಅಕ್ಷರ ಜೋಡಣೆ ತಂತ್ರಜ್ಞಾನ ಹಿಡಿದು ಪ್ರಸ್ತುತ ಕಂಪ್ಯೂಟರ್ ಕೀ ಮಣಿ ತಂತ್ರಜ್ಞಾನದಲ್ಲೂ ಪರಿಣಿತಿ ಹೊಂದಿದ್ದಾರೆ. ಹೆಬ್ರಿ, ಕಾರ್ಕಳ, ಬೈಂದೂರು ವ್ಯಾಪ್ತಿಯಲ್ಲಿ ದಶಕಗಳ ಹಿಂದೆ ಸಕ್ರೀಯವಾಗಿದ್ದ ನಕ್ಸಲ್ ಚಟುವಟಿಕೆಯ ಪ್ರತಿಯೊಂದು ವಿದ್ಯಾಮಾನದ ಬಗ್ಗೆ ಸ್ಥಳಕ್ಕೆ ತೆರಳಿ ಅಲ್ಲಿನ ನೈಜ ಚಿತ್ರಣವನ್ನು ತನ್ನ ವರದಿ ಮೂಲಕ ಓದುಗರಿಗೆ ಕಟ್ಟಿಕೊಟ್ಟಿರುವ ಕೀರ್ತಿ ಇವರದ್ದು.

ಪಡುಬಿದ್ರೆ ನಂದಿಕೂರು ಪರಿಸರದಲ್ಲಿ ಆರಂಭಗೊಂಡಿದ್ದ ನಾಗಾರ್ಜುನ, ಯುಪಿಸಿಎಲ್ ಪರಿಸರದ ಮೇಲೆ ಬೀರುವ ಪರಿಣಾಮ, ಅದರ ಹೋರಾಟದ ವರದಿಯನ್ನು ಓದುಗರಿಗೆ ಯಥಾವತ್ತಾಗಿ ಕಟ್ಟಿಕೊಟ್ಟಿದ್ದರು. ಜನಪರ ಸುದ್ದಿ ಹಾಗೂ ಮಾನವೀಯ ವರದಿಗಳ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದರು.

ಸನ್ಮಾನ, ಮಾನದಿಗೆಯಿಂದ ಬಹು ದೂರವಿರುವ ಇವರನ್ನೇ ಪ್ರಶಸ್ತಿ ಆರಿಸಿಕೊಂಡು ಬಂದಿವೆ. ಅದರಂತೆ ಇವರು 2014ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ವಾರ್ತಾ ಇಲಾಖೆ ವತಿಯಿಂದ ಪ್ರಪ್ರಥಮ ಬಾರಿಗೆ ಆಯೋಜಿಸುತ್ತಿರುವ ಪತ್ರಿಕಾ ದಿನಾಚರಣೆ ಯಂದು ಇವರನ್ನು ಗುರುತಿಸಿ ಗೌರವಿಸುತ್ತಿರುವುದು ಇವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಅನೇಕ ಶಿಷ್ಯ ಬಳಗವನ್ನು ಹೊಂದಿರುವ ಇವರು, 63ರ ಹರೆಯದಲ್ಲೂ ಆರಂಭದ ಯೌವ್ವನದ ಹುಮ್ಮಸ್ಸು ಬಹಳಷ್ಟು ಉಳಿಸಿಕೊಂಡಿರುವ ಇವರು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು