ವಾಹನ ಅಪಘಾತದ ವಿಚಾರದಲ್ಲಿ ಹಲ್ಲೆ : ಆರೋಪಿಯ ಬಂಧನ

ಉಳ್ಳಾಲ : ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದ ವಿಚಾರವಾಗಿ ಚಾಲಕರಿಬ್ಬರ ಮಧ್ಯೆ ಹೊಯ್ ಕೈ ನಡೆದಿರುವ ಘಟನೆ ಬುಧವಾರ ರಾತ್ರಿ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಸಂಭವಿಸಿದೆ. ಈ ಪ್ರಕರಣವು ಉಳ್ಳಾಲ ಠಾಣಾ ಮೆಟ್ಟಿಲೇರಿದ್ದು, ಮಾತುಕತೆಗೆ ತೆರಳಿದ್ದ ಸಂಘ ಪರಿವಾರದ ಮುಖಂಡನಿಗೆ ಹಲ್ಲೆಗೈದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಅರ್ಜುನ್ ಮಾಡೂರು ಹಲ್ಲೆಗೊಳಗಾದವರು. ಕಾಸರಗೋಡು ಜಿಲ್ಲೆಯ ಹೊಸಂಗಡಿ, ಕಡಂಬಾರು ಸರಕಾರಿ ಶಾಲೆಯ ಬಳಿಯ ನಿವಾಸಿ ಮುಹಮ್ಮದ್ ಆಸಿಫ್(33) ಹಲ್ಲೆ ಆರೋಪಿ. ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಘಟನೆ ವಿವರ :
ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಬುಧವಾರ ರಾತ್ರಿ 9:45ರ ವೇಳೆ ಕುಂಪಲದ ಶರತ್ ಮತ್ತು ಕೇರಳದ ಇಬ್ರಾಹೀಂ ಖಲೀಲ್ ಎಂಬವರ ಕಾರುಗಳ ಮಧ್ಯೆ ಅಪಘಾತ ಉಂಟಾಗಿತ್ತು. ಈ ವೇಳೆ ವಾಗ್ವಾದ ನಡೆದು ಖಲೀಲ್ ಮತ್ತು ಆತನ ಸಹೋದರ ಆಸಿಫ್ ಸೇರಿ ಶರತ್‌ಗೆ ಕೈಯಲ್ಲಿ ಹಲ್ಲೆಗೈದಿದ್ದಾರೆಂದು ಆರೋಪಿಸಲಾಗಿದ್ದು, ಈ ಪ್ರಕರಣವು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ವಿಷಯ ತಿಳಿದು ತಡರಾತ್ರಿ ಶರತ್‌ರ ಪರಿಚಯಸ್ಥ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅಲ್ಲಿ ಕಾರು ಚಾಲಕರಾದ ಶರತ್, ಖಲೀಲ್ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ ಅರ್ಜುನ್ ಮೇಲೆ ಆರೋಪಿ ಆಸಿಫ್ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಈ ಸಂಬಂಧ ಆಸಿಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೊಳಗಾದ ಅರ್ಜುನ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿ ಠಾಣೆಯ ಮುಂದೆ ಜಮಾಯಿಸಿದ ಸಂಘ ಪರಿವಾರದ ಕಾರ್ಯಕರ್ತರು ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಧನ್ಯಾ ನಾಯಕ್ ಬಿಗಿ ಬಂದೋಬಸ್ತ್ ಕಲ್ಪಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಈ ವಿಚಾರ ತಿಳಿಯುತ್ತಲೇ ತಡರಾತ್ರಿ ವೇಳೆ ಉಳ್ಳಾಲ ಠಾಣೆಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಅರುಣ್ ಪುತ್ತಿಲ ಅವರು, ಠಾಣೆಯೊಳಗಡೆಯೇ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಹಿಸಿದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್