ಮಲ್ಪೆ ಬಂದರಿನಲ್ಲಿ ಬಾಲಕಾರ್ಮಿಕರ ಚಟುವಟಿಕೆಗೆ ಕಡಿವಾಣ ಹಾಕುವಂತೆ ಉಡುಪಿ ಡಿಸಿ ಸೂಚನೆ

ಉಡುಪಿ : ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ 14 ವರ್ಷದೊಳಗಿನ ಬಾಲ ಕಾರ್ಮಿಕರು ಮೀನು ಹೆಕ್ಕುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಕಾರ್ಯಪಡೆಯ ಅಧಿಕಾರಿಗಳು ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮಲ್ಪೆ ಬಂದರಿನಲ್ಲಿ ಬೆಳಗಿನ ಜಾವ ಮೀನು ಹರಾಜು ಕೇಂದ್ರಗಳಲ್ಲಿ ನಡೆಯುವ ಮೀನಿನ ಏಲಂ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಮೀನು ಹೆಕ್ಕುವ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ದಾಳಿ ನಡೆಸಿದರೂ ಈ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಕಾರ್ಯಪಡೆಯ ಸದಸ್ಯರುಗಳು ಆಗಿಂದಾಗ್ಗೆ ನಿರಂತರ ಅನಿರೀಕ್ಷಿತ ದಾಳಿ ಹಾಗೂ ಭೇಟಿಗಳನ್ನು ಮಾಡುವ ಮೂಲಕ ಬಂದರಿನಲ್ಲಿ ಬಾಲಕಾರ್ಮಿಕತೆಯನ್ನು ಸಂಪೂರ್ಣವಾಗಿ ತೊಡೆದು ಹಾಕ ಬೇಕು ಎಂದು ಅವರು ಸೂಚನೆ ನೀಡಿದರು.

ಬಾಲ ಕಾರ್ಮಿಕತೆ ಮಕ್ಕಳ ಬಾಲ್ಯ ಅವರ ಸಾಮರ್ಥ್ಯ, ಘನತೆಕಸಿದು ಕೊಳ್ಳುವುದಲ್ಲದೇ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ನೈತಿಕವಾಗಿ ಹಾನಿಯನ್ನುಂಟು ಮಾಡುತ್ತದೆ. ಬಡಮಕ್ಕಳು ಶಿಕ್ಷಣವಂತರಾಗಬೇಕು. ಉತ್ತಮ ವಿದ್ಯಾವಂತರಾಗಿ ಭವ್ಯ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು. ಆದರೆ ವಿವಿಧ ಕಾರಣಗಳಿಂದಾಗಿ ಈ ಮಕ್ಕಳು ಶಾಲೆಯನ್ನು ಅರ್ಧದಲ್ಲೇ ತೊರೆದು ದುಡಿಮೆಗೆ ಮುಂದಾಗುತ್ತಾರೆ. ಎಲ್ಲರೂ ಸೇರಿ ಇದನ್ನು ತಪ್ಪಿಸಬೇಕಿದೆ ಎಂದರು.

ಸಮಾಜದಲ್ಲಿ ಬಾಲಕಾರ್ಮಿಕತೆಯೆಂಬ ಅನಿಷ್ಠ ಪದ್ಧತಿಯನ್ನು ತೊಡೆದು ಹಾಕಬೇಕು. ಇದಕ್ಕಾಗಿ ಮಕ್ಕಳ ಪೋಷಕರಲ್ಲಿ ಅರಿವು ಮೂಡಿಸುವ ಕೆಲಸ‌ವನ್ನು ನಿರಂತರವಾಗಿ ಮಾಡುವುದರ ಜೊತೆಗೆ 14 ವರ್ಷ ದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಶಾಲೆಗೆ ಹೋಗುವುದನ್ನು ತಪ್ಪಿಸಬಾರದು. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ