ಸುರತ್ಕಲ್ : ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಡಿಗೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಇಬ್ಬರು ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.
ಜಗದೀಶ್ ಮತ್ತು ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ಪ್ರಯಾಣಿಕನ ರಕ್ಷಣೆ ಮಾಡಿದ್ದ ಸಿಬ್ಬಂದಿ. ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಸೂಪರ್‌ಫಾಸ್ಟ್ ರೈಲು ತೆರಳುತ್ತಿದ್ದ ವೇಳೆ ಹಿರಿಯ ನಾಗರಿಕರೊಬ್ಬರು ಅಚಾನಕ್ಕಾಗಿ ಬಿದ್ದಿದ್ದಾರೆ. ಕೂಡಲೇ ಇದನ್ನು ಗಮನಿಸಿ ಸಮಯಪ್ರಜ್ಞೆ ಮೆರೆದ ಮನೋಜ್ ಶೆಟ್ಟಿ ಮತ್ತು ಜಗದೀಶ್ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಪ್ರಯಾಣಿಕನ ರಕ್ಷಿಸಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ರೈಲ್ವೆ ಇಲಾಖೆಯ ಸಿಎಂಡಿ ಸಂತೋಷ್ ಅವರು ಇಬ್ಬರಿಗೂ ತಲಾ 5 ಸಾವಿರ ರೂ. ಗೌರವಧನ ನೀಡಿ, ಅಭಿನಂದಿಸಿದರು.