ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳು ಸಿಸಿಬಿ ಬಲೆಗೆ

ಮಂಗಳೂರು : ಮಾದಕ ವಸ್ತು ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು 42 ಗ್ರಾಂ ಎಂಡಿಎಂಎ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇವರು ಬೆಂಗಳೂರಿನಿಂದ ಮಾದಕ ವಸ್ತುವಾದ ಎಂಡಿಎಂಎಯನ್ನು ಖರೀದಿಸಿಕೊಂಡು ಕಾರಿನಲ್ಲಿ ನಗರಕ್ಕೆ ಸಾಗಿಸಿ ತಂದಿದ್ದಲ್ಲದೆ ಸುರತ್ಕಲ್ ಸಮೀಪದ ಎನ್‌ಐಟಿಕೆ ಮುಕ್ಕ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಕಾಸರಗೋಡು ಜಿಲ್ಲೆಯ ಕಳನಾಡು ಎಂಬಲ್ಲಿನ ಶಾಜಹಾನ್ ಪಿ.ಎಂ.(32), ಮೂಲತಃ ಕಾಸರಗೋಡು ಅಡೂರಿನ ಪ್ರಸಕ್ತ ಬೆಂಗಳೂರಿನಲ್ಲಿ ವಾಸವಾಗಿರುವ ನಿಶಾದ್ (27), ಮೂಲತಃ ಮಡಿಕೇರಿಯ ಪ್ರಸಕ್ತ ಬೆಂಗಳೂರಿನಲ್ಲಿ ವಾಸವಾಗಿರುವ ಮನ್ಸೂರ್ ಎಂ.ಎಂ (27) ಬಂಧಿತ ಆರೋಪಿಗಳಾಗಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದರು.ಅಲ್ಲದೆ 2,10,000 ರೂ. ಮೌಲ್ಯದ 42 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 5 ಮೊಬೈಲ್ ಫೋನ್‌ಗಳು, ಹೊಸ ಮಾರುತಿ ಬಲೆನೋ ಕಾರು, ಡಿಜಿಟಲ್ ತೂಕ ಮಾಪಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 12,18,500 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳು ಅಧಿಕ ಲಾಭಗಳಿಸುವ ಉದ್ದೇಶದಿಂದ ಹೊಸ ಕಾರನ್ನು ಬಾಡಿಗೆಗೆ ಪಡೆದು ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿಕೊಂಡು ಕರ್ನಾಟಕ, ಕೇರಳ ರಾಜ್ಯದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ಪೈಕಿ ಶಾಜಹಾನ್ ವಿರುದ್ಧ ಈ ಹಿಂದೆ ಕಾಸರಗೋಡು ಜಿಲ್ಲೆಯ ಮೇಲ್ಪರಂಬ, ಬೇಕಲ, ವಿದ್ಯಾನಗರ, ಕುಂಬಳೆ, ಕಾಸರಗೋಡು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ/ಸೇವನೆಗೆ ಸಂಬಂಧಪಟ್ಟಂತೆ 7 ಪ್ರಕರಣ ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ನಿಶಾದ್ ವಿರುದ್ಧ ಪುತ್ತೂರು ನಗರ ಹಾಗೂ ಮಡಿಕೇರಿ ಪೊಲೀಸ್ ಠಾಣೆಯಲ್ಲಿ 2 ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ, ಎಸ್ಸೈ ನರೇಂದ್ರ ಮತ್ತು ಸಿಸಿಬಿ ಪೊಲೀಸರು ಪಾಲ್ಗೊಂಡಿದ್ದರು.

Related posts

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ