ಸಾವಿರಾರು ಸಂಖ್ಯೆಯಲ್ಲಿ ರಿಕ್ಷಾ ಚಾಲಕರಿಂದ ಮೆರವಣಿಗೆ, ಪ್ರತಿಭಟನೆ

ಮಂಗಳೂರು : ಎಲೆಕ್ಟಿಕಲ್ ಅಟೋ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ಆದೇಶವನ್ನು ವಾಪಸ್ ಪಡೆಯಲು ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ಆಟೋ ರಿಕ್ಷಾ ಚಾಲಕರು ಮೆರವಣಿಗೆ ಪ್ರತಿಭಟನಾ ಸಭೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ ಮತ್ತು ಸಮಾನ ಮನಸ್ಕ ಆಟೋರಿಕ್ಷಾ ಚಾಲಕ ಮಾಲಕರ ಸಂಘಟನೆಗಳ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರವರೆಗೆ ಮೆರವಣಿಗೆ ನಡೆಸಿದ ಆಟೋ ರಿಕ್ಷಾ ಚಾಲಕರು, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸಲು ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಚಲೋಗೆ ನಿರ್ಧರಿಸಿ ಮೆರವಣಿಗೆ ಆರಂಭಿಸಿದ್ದ ಆಟೋ ರಿಕ್ಷಾ ಚಾಲಕರನ್ನು ಪೊಲೀಸರು ಕ್ಲಾಕ್ ಟವರ್ ಬಳಿ ಬ್ಯಾರಿಕೇಡ್‌ಗಳನ್ನೂ ಅಳವಡಿಸಿ ತಡೆದರು.

ಈ ಸಂದರ್ಭ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಜಿಲ್ಲಾಧಿಕಾರಿಯವರು ಏಕಪಕ್ಷೀಯವಾಗಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಗ್ಗೆ ಆದೇಶ ಮಾಡಿರುವುದನ್ನು ಹಿಂಪಡೆಯುವ ನಿಟ್ಟಿನಲ್ಲಿ ಈ ಹೋರಾಟ ಎಚ್ಚರಿಕೆಯ ಕರೆಗಂಟೆ. ಆದೇಶ ವಾಪಸ್ ಪಡೆಯದಿದ್ದರೆ ಜಿಲ್ಲೆಯ ಸಾವಿರಾರು ಸಂಖ್ಯೆಯ ಬದುಕಿಗೆ ಕೊಳ್ಳಿ ಇಟ್ಟಂತೆ ಎಂದರು.

ಮಾತೆತ್ತಿದರೆ ಕೇಂದ್ರ ಸರಕಾರದ ತೀರ್ಮಾನ ಎನ್ನುತ್ತಾರೆ. ಆದರೆ ಪಕ್ಕದ ಉಡುಪಿ ಅಥವಾ ಬೇರೆ ಜಿಲ್ಲೆಗಳಲ್ಲಿ ಇಲ್ಲದ ಆದೇಶ ದಕ ಜಿಲ್ಲೆಯಲ್ಲಿ ಯಾಕೆ ಎಂದು ಪ್ರಶ್ನಿಸಿದ ಅವರು, ಎಲೆಕ್ಟ್ರಿಕ್ ಕಂಪನಿಗಳ ಜೊತೆ ಶಾಮೀಲಾಗಿ ಈ ತೀರ್ಮಾನವನ್ನು ಜಿಲ್ಲಾಡಳಿತ ಮಾಡಿದೆ ಎಂದು ಆರೋಪಿಸಿದರು.

ನಗರದಲ್ಲಿ ಏಳರಿಂದ ಒಂಬತ್ತು ಸಾವಿರ ರಿಕ್ಷಾ ಚಾಲಕರು ಬಾಡಿಗೆಗಾಗಿ ಪರಿತಪಿಸುತ್ತಿದ್ದಾರೆ. ರಿಕ್ಷಾ ಪಾರ್ಕ್‌ನಲ್ಲಿ ಲೆಕ್ಕಕ್ಕಿಂತ ಹೆಚ್ಚು ರಿಕ್ಷಾ ನಿಂತರೆ ಪೋಲೀಸರು ಪ್ರಕರಣ ದಾಖಲಿಸುತ್ತಾರೆ. ಸುಮಾರು ಒಂಬತ್ತು ಸಾವಿರ ರಿಕ್ಷಾಗಳಿಗೆ 115 ಅಧಿಕೃತ ಪಾರ್ಕ್ ಇರುವುದು. ಹೀಗಿರುವಾಗ ಇಷ್ಟು ರಿಕ್ಷಾ‌ಗಳು ಪಾರ್ಕ್ ಮಾಡುವುದು ಎಲ್ಲಿ ಎಂದು ಪ್ರಶ್ನಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಲೋಕೇಶ್ ಶೆಟ್ಟಿ ಬಲ್ಲಾಳ್‌ಬಾಗ್, ವಿಷ್ಣು ಮೂರ್ತಿ, ಅರುಣ್ ಕುಮಾರ್ ಮಾತನಾಡಿದರು.

ದ.ಕ.ಜಿಲ್ಲಾಡಳಿತದ ನಿರ್ಧಾರವನ್ನು ಕೂಡಲೇ ವಾಪಸ್ ಪಡೆದು ಜಿಲ್ಲೆಯಾದ್ಯಂತ ಅಟೋರಿಕ್ಷಾ ಚಾಲಕರು ಅನುಭವಿಸುತ್ತಿರುವ ಭವಣೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ವೈಜ್ಞಾನಿಕ ನೆಲೆಯಲ್ಲಿ ವ್ಯವಸ್ಥೆ ಮಾಡಬೇಕೆಂದು ಎಂದು ಒಕ್ಕೂಟ ಒತ್ತಾಯಿಸಿದೆ.

ಒಕ್ಕೂಟದ ಅಧ್ಯಕ್ಷ ಅಶೋಕ್ ಶೆಟ್ಟಿ ಬೋಳಾರ, ಅಬೂಬಕರ್ ಸುರತ್ಕಲ್, ಮುಸ್ತಾಕ್ ಅಲಿ, ಸ್ಟ್ಯಾನಿ ನೋರೋನ, ಭರತ್ ಕುಮಾರ್, ಲೋಕೇಶ್ ಬಲ್ಲಾಳ್ ಬಾಗ್, ಅರುಣ್ ಕುಮಾರ್, ವಸಂತ್ ಮೇರ ನಗರ, ಅಪ್ಪು ಸ್ವಾಮಿ, ವಿಷ್ಣುಮೂರ್ತಿ ವಿಶ್ವನಾಥ್ ಶೆಟ್ಟಿ, ಶೇಖರ್ ದೇರಳಕಟ್ಟೆ, ಇಬ್ರಾಹಿಂ ಮದಕ, ಲೋಕೇಶ್, ಕೇಶವ, ಸುರೇಶ್ ಬಜಾಲ್, ಗಂಗಾಧರ್ ಸುರತ್ಕಲ್ ಇನ್ನಿತರರು ಭಾಗವಹಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ