ಚುನಾವಣಾ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಸುಲಿಗೆ ಆರೋಪ : ನಿರ್ಮಲಾ ಸೀತಾರಾಮನ್, ಬಿ.ವೈ. ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ ಸೇರಿ ಹಲವರ ವಿರುದ್ಧ ಎಫ್ಐಆರ್

ಬೆಂಗಳೂರು : ಚುನಾವಣಾ ಬಾಂಡ್ ಮೂಲಕ ಕಾರ್ಪೊರೇಟ್ ಕಂಪೆನಿಗಳಿಂದ ಸಾವಿರಾರು ಕೋಟಿ ರೂ. ಸುಲಿಗೆ ಮಾಡಿದ ಆರೋಪದಡಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿ ಹಲವರ ವಿರುದ್ಧ ಬೆಂಗಳೂರಿನ ತಿಲಕ್‍ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‍ಐಆರ್ ದಾಖಲಾಗಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಮೇರೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಾರಿ ನಿರ್ದೇಶನಾಲಯ(ಈ.ಡಿ) ಅಧಿಕಾರಿಗಳು ಸೇರಿ ಇತರರ ವಿರುದ್ಧ ಅಪರಾಧಿಕ ಒಳಸಂಚು, ಸುಲಿಗೆಯಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಎ1 ಆರೋಪಿಯಾಗಿದ್ದಾರೆ. ಈ.ಡಿ. ಅಧಿಕಾರಿಗಳು ಎ2, ಕೇಂದ್ರ ಬಿಜೆಪಿ ಪದಾಧಿಕಾರಿಗಳು ಎ3, ನಳಿನ್ ಕುಮಾರ್ ಕಟೀಲ್ ಎ4, ಬಿ.ವೈ.ವಿಜಯೇಂದ್ರ ಎ5, ರಾಜ್ಯ ಬಿಜೆಪಿ ಪದಾಧಿಕಾರಿಗಳು ಎ6 ಆರೋಪಿಗಳಾಗಿದ್ದಾರೆ.

ಚುನಾವಣಾ ಬಾಂಡ್ ಮೂಲಕ 8 ಸಾವಿರ ಕೋಟಿ ರೂ. ಸುಲಿಗೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ದೂರುದಾರ ಜನಾಧಿಕಾರ ಸಂಘರ್ಷ ಪರಿಷತ್(ಜೆಎಸ್‍ಪಿ)ನ ಆದರ್ಶ ಆರ್. ಅಯ್ಯರ್ ಎಂಬವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನಾಯಾಲಯ, ಎಫ್‍ಐಆರ್ ದಾಖಲಿಸುವಂತೆ ಬೆಂಗಳೂರಿನ ತಿಲಕ್‍ನಗರ ಠಾಣಾ ಪೊಲೀಸರಿಗೆ ಶುಕ್ರವಾರ ಸೂಚನೆ ನೀಡಿತ್ತು.

ಜಾರಿ ನಿರ್ದೇಶನಾಲಯ(ಈ.ಡಿ.) ಬಳಸಿಕೊಂಡು ದೇಶದ ಕಾರ್ಪೊರೇಟ್ ಕಂಪೆನಿಗಳ ಮೂಲಕ ದಾಳಿ ಮಾಡಿ, ಅವರಿಂದ ಚುನಾವಣಾ ಬಾಂಡ್ ಮೂಲಕ ಸುಮಾರು 8 ಸಾವಿರ ಕೋಟಿ ರೂ.ವರೆಗೂ ಹಣ ಸುಲಿಗೆ ಮಾಡಲಾಗಿದೆ. ರಾಜ್ಯದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಹಸ್ಯ ಮಾರ್ಗವಾಗಿ ಹಣ ವರ್ಗಾವಣೆಗೆ ಸಹಕರಿಯಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಈ.ಡಿ. ಬಳಸಿಕೊಂಡು ಕಂಪೆನಿಗಳ ಮೇಲೆ ದಾಳಿ ಮಾಡಿ, ಸಿಇಒ ಹಾಗೂ ಎಂ.ಡಿ.ಯನ್ನು ಬಂಧಿಸಲಾಗಿತ್ತು. ಬಂಧನಕ್ಕೆ ಹೆದರಿದ ಕಂಪೆನಿ ಮಾಲಕರಿಗೆ ಚುನಾವಣಾ ಬಾಂಡ್ ಖರೀದಿಗೆ ಒತ್ತಾಯಿಸಿದ್ದಾರೆ ಎಂದು ಆದರ್ಶ ಆರ್. ಅಯ್ಯರ್ ದೂರಿನಲ್ಲಿ ವಿವರಿಸಿದ್ದಾರೆ.

Related posts

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ