ಈಜಲು ತೆರಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಮುದ್ರಪಾಲು

ಸುರತ್ಕಲ್‌ : ಇಲ್ಲಿನ ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ಈಜಲು ಇಳಿದಿದ್ದ ನಾಲ್ವರು ಯುವಕರ ಪೈಕಿ ಮೂವರು ‌ಸಮುದ್ರ ಪಾಲಾಗಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಬುಧವಾರ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್ ಎಸ್ (31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್(30), ಬೆಂಗಳೂರು ಜೆ.ಪಿ. ನಗರ ನಿವಾಸಿ ಸತ್ಯವೇಲು (30) ಮೃತಪಟ್ಟವರು. ಬೀದರ್ ಜಿಲ್ಲೆ ಹಂಗಾರಗಾ ನಿವಾಸಿ ಪರಮೇಶ್ವರ್‌ (30) ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ನಾಲ್ವರು ಬೆಂಗಳೂರಿನ ಎಎಂಸಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಸ್ನೇಹಿತರಾಗಿದ್ದರು. ನಾಲ್ವರು ಮಂಗಳವಾರ ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ಆಗಮಿಸಿ, ಬೆಳಗ್ಗೆ ಮಂಗಳೂರಿಗೆ ತಲುಪಿದ್ದಾರೆ. ಮಧ್ಯಾಹ್ನದ ವೇಳೆಗೆ ಕುಳಾಯಿಜೆಟ್ಟಿ ಬಳಿಗೆ ಬಂದಿದ್ದಾರೆ ಎಲ್ಲರೂ ಸಮುದ್ರಕ್ಕೆ ಇಳಿದು ಆಡುತ್ತಿದ್ದ ಸಂದರ್ಭ ನಾಲ್ವರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಇವರು ಸಮುದ್ರಪಾಲು ಆಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂವರು ನೀರು ಪಾಲಾಗಿದ್ದರು. ಓರ್ವನನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸಮುದ್ರ ಪಾಲಾದ ಮೂವರ ಮೃತದೇಹ ಜೆಟ್ಟಿಯ ಬಲಭಾಗದ ಮೂಲೆಯಲ್ಲಿ ಪತ್ತೆಯಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುರತ್ಕಲ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮಹಜರು ನಡೆಸಿ ಎ.ಜೆ.ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Related posts

ಮರದ ದಿಮ್ಮಿಗೆ ಮೀನುಗಾರಿಕಾ ಬೋಟ್ ಡಿಕ್ಕಿ : ಅಪಾರ ಹಾನಿ

ಸಿಬಿಐ ಅಧಿಕಾರಿ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

ಪೆಟ್ರೋಲ್ ಬಂಕ್ ಮೇಲ್ವಿಚಾರಕನಿಂದ ವಂಚನೆ ಆರೋಪ; ದೂರು ದಾಖಲು