ಹೆಡ್‌‌ಕಾನ್‌ಸ್ಟೇಬಲ್ ರಶೀದ್ ತನಿಖೆಯಾದಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿಂದಿನ ರಹಸ್ಯ ಬಯಲು : ಕೆ.ಟಿ.ಉಲ್ಲಾಸ್ ಆಗ್ರಹ

ಮಂಗಳೂರು : ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಜ್ಪೆ ಠಾಣಾ ಹೆಡ್‌ ಕಾನ್‌ಸ್ಟೇಬಲ್ ರಶೀದ್ ಕೂಡಾ ಸೇರಿದ್ದಾರೆ ಎಂಬ ಶಂಕೆ ಬಲವಾಗಿದೆ. ಆದ್ದರಿಂದ ರಶೀದ್‌ರನ್ನು ತನಿಖೆಗೊಳಪಡಿಸಿದರೆ, ಇದರ ಹಿಂದಿರುವ ಪೂರ್ಣ ಮಾಹಿತಿ ದೊರೆಯಲು ಸಾಧ್ಯ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ್ ಕೆ.ಟಿ.ಉಲ್ಲಾಸ್ ಆಗ್ರಹಿಸಿದರು.

ಕದ್ರಿಯ ವಿಶ್ವಶ್ರೀಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ರಶೀದ್ ಪದೇಪದೇ ಸುಹಾಸ್ ಶೆಟ್ಟಿಗೆ ಕರೆ ಮಾಡಿ ಹಿಂಸೆ ಕೊಡುತ್ತಿದ್ದ ಎಂದು ಆತನ ಸ್ನೇಹಿತರು ಹೇಳುತ್ತಿದ್ದಾರೆ. ಕೊಲೆಗೆ ಮೂರು ದಿನಕ್ಕೆ ಮೊದಲು ಎಸಿಪಿಯವರು ಸುಹಾಸ್ ಶೆಟ್ಟಿಯನ್ನು ಕರೆದು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡಿದ್ದಲ್ಲಿ ಕೇಸ್ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದ್ದರಿಂದ ಆತನಲ್ಲಿ ಶಸ್ತ್ರಾಸ್ತ್ರಗಳು ಇಲ್ಲ ಎಂಬ ಸುದ್ದಿ ಕೊಲೆ ಆರೋಪಿಗಳಿಗೆ ಹೇಗೆ ಗೊತ್ತಾಗಿದೆ. ಈ ಮಾಹಿತಿ ರಶೀದ್‌ನಿಂದಲೇ ಆರೋಪಿಗಳಿಗೆ ಸಿಕ್ಕಿದೆ ಎಂದು ಅವರು ಆರೋಪಿಸಿದರು.

ಸುಹಾಸ್ ಶೆಟ್ಟಿ ಕೊಲೆ ಫಾಝಿಲ್ ಕೊಲೆಗೆ ಪ್ರತಿಕಾರವಲ್ಲ. ಇದರಲ್ಲಿ ಫಾಝಿಲ್ ತಮ್ಮ ಅದಿಲ್ ಮಾತ್ರವಲ್ಲ, ನಿಷೇಧಿತ ಪಿಎಫ್ಐ ಸಂಘಟನೆ 50ಲಕ್ಷಕ್ಕೂ ಅಧಿಕ ಹಣಕಾಸು ನೆರವು ನೀಡಿದೆ ಎಂಬ ಬಲವಾದ ಅನುಮಾನವಿದೆ. ಕೊಲೆಯ ಬಳಿಕ ಆರೋಪಿಗಳು ಯಾವ ಆತುರವಿಲ್ಲದೆ ಕಾರು ಹತ್ತಿ ಹೋಗಿದ್ದಾರೆ. ಕೊಲೆ ನಡೆದ ಸಂದರ್ಭ ಅಲ್ಲಿದ್ದವರೆಲ್ಲಾ ಇವರದ್ದೇ ಜನ ಆಗಿರಬೇಕು. ಆದ್ದರಿಂದ ಅವರಿಗೆ ಅಷ್ಟು ಆತ್ಮವಿಶ್ವಾಸ ಬಂದಿತ್ತು ಎಂದರು.

ಈ ಹಿಂದೆ ನಡೆದ ಪ್ರಶಾಂತ ಪೂಜಾರಿ, ಸುಖಾನಂದ ಶೆಟ್ಟಿ ಹತ್ಯೆಯಲ್ಲಿ ಪಿಎಫ್ಐ ಸಂಘಟನೆಯ ಕೈವಾಡವಿತ್ತು, ಹಣಕಾಸು ನೆರವು ನೀಡಿತ್ತು. ಅದೇ ರೀತಿ ಈ ಪ್ರಕರಣದಲ್ಲೂ ಪಿಎಫ್ಐನ ಕೈವಾಡವಿದೆ‌ ಬಲವಾದ ಶಂಕೆಯಿದೆ. ಈ ಪ್ರಕರಣದಲ್ಲಿ ಆರೋಪಿಗಳಾದ ರಂಜಿತ್ ಮತ್ತು ನಾಗರಾಜ್ ಇಬ್ಬರಿಗೂ ಸುಹಾಸ್ ಶೆಟ್ಟಿ ಯಾರು ಎಂದು ಗೊತ್ತಿಲ್ಲ. ಅವರಿಗೆ ಸುಹಾಸ್ ಶೆಟ್ಟಿ ಮೇಲೆ ಯಾವ ವಿರೋಧವೂ ಇಲ್ಲ.

ಅಪರಾಧ ಚಟುವಟಿಕೆ ಹಿನ್ನೆಲೆಯವರೂ ಅಲ್ಲ. ಈ ಕೇಸ್‌ನಲ್ಲಿ ಹಿಂದೂಗಳು ಇರಬೇಕೆಂದು ಅವರಿಬ್ಬರನ್ನು ಬಳಸಿದ್ದಾರೆ. ಪಿಎಫ್ಐ ಬ್ಯಾನ್ ಆದ ಬಳಿಕ ಇಂತಹ ಕೃತ್ಯವನ್ನು ನೆರವಾಗಿ ಮಾಡದೇ ಹಿಂದೂಗಳಲ್ಲಿ ಮಾಡಿಸುತ್ತಿದ್ದಾರೆ. ಪ್ರಕರಣ ಎನ್ಐಎಗೆ ಹೋಗದಂತೆ ಹಿಂದೂಗಳನ್ನು ಬಳಸುತ್ತಿದ್ದಾರೆ‌. ಆದ್ದರಿಂದ ಪ್ರಕರಣದ ತನಿಖೆಯನ್ನು ಎನ್ಐಎಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ