ಯಕ್ಷಗಾನ ಕಲೆ ಉಳಿಸಲು ಪ್ರೇಕ್ಷಕರ ಜವಾಬ್ದಾರಿ ಹೆಚ್ಚಿದೆ : ಹಟ್ಟಿಯಂಗಡಿ ಮೇಳದ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ.ತಲ್ಲೂರು

ಉಡುಪಿ : ಯಕ್ಷಗಾನ ಕಲೆ ಉಳಿಸುವಲ್ಲಿ ಪ್ರೇಕ್ಷಕರ ಜವಾಬ್ದಾರಿ ಹೆಚ್ಚಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಸೋಮವಾರ ಕುಂದಾಪುರದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ರೋಟರಿ ನರಸಿಂಹ ಸಭಾ ಭವನದಲ್ಲಿ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳದ ವತಿಯಿಂದ ಮೂರು ದಿನಗಳ ಕಾಲ ನಡೆದ ‘ಕುಂದಾಪುರ ಯಕ್ಷೋತ್ಸವ -2024’ ಕಾರ್ಯಕ್ರಮದ ಸಮಾರೋಪದಲ್ಲಿ ಹಟ್ಟಿಯಂಗಡಿ ಮೇಳದ ವತಿಯಿಂದ ಸನ್ಮಾನ ಸ್ವೀಕರಿಸಿ, ಮಾತನಾಡಿದರು.

ಯಕ್ಷಗಾನ ಕಲೆ ಉಳಿಯಬೇಕು, ಬೆಳೆಯಬೇಕು ಎನ್ನುವುದಾದರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲಾವಿದರು ಬೇಕು. ಹೀಗಾಗಿ ಹೊಸ ಮೇಳಗಳನ್ನು ಪ್ರೇಕ್ಷಕ ಪ್ರೋತ್ಸಾಹಿಸುವುದು ಕಲಾವಿದರ ಏಳಿಗೆಯಿಂದ ಅತೀ ಆವಶ್ಯಕವಾಗಿದೆ. ಕುಂದಾಪುರ ಯಕ್ಷಗಾನ ಹುಟ್ಟಿದ ಮಣ್ಣು. ಇಲ್ಲಿನ ಜನತೆ ಯಕ್ಷಗಾನಕ್ಕೆ ನೀಡಿದ ಪ್ರೋತ್ಸಾಹವನ್ನು ಮರೆಯುವಂತಿಲ್ಲ. ಇಂದಿನ ಮೊಬೈಲ್ ಯುಗದಲ್ಲಿ ಎಲ್ಲವನ್ನೂ ಮೊಬೈಲ್‌ನಲ್ಲಿಯೇ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದಾಗಿ ನೇರ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ ಎಂದರು.

ಯಕ್ಷಗಾನ ಒಂದು ದೈವ ಕಲೆ. ಅದಕ್ಕೆ ರಾಜಾಶ್ರಯ ನೀಡಿರುವುದು ನಮ್ಮ ದೈವ, ದೇವಸ್ಥಾನಗಳು. ಎಲ್ಲಿಯವರೆಗೆ ಇವು ಇರುತ್ತವೆಯೋ ಅಲ್ಲಿಯವರೆಗೆ ಯಕ್ಷಗಾನ ಕಲೆ ಉಳಿಯುತ್ತದೆ ಎಂದ ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷನಾಗಿ ಯಕ್ಷಗಾನ, ಕಲಾವಿದರ ಹಿತದೃಷ್ಟಿಯಿಂದ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇಂಗಿತವನ್ನು ವ್ಯಕ್ತ ಪಡಿಸಿದರು.

ಕಲಾ ಪ್ರೋತ್ಸಾಹಕ ರಾಜೇಶ್ ಕಾವೇರಿ ಮಾತನಾಡಿ, ಕುಂದಾಪುರದಲ್ಲಿ ಮಳೆಗಾಲದಲ್ಲೂ ಯಕ್ಷಗಾನ ಪ್ರದರ್ಶನಗಳು ಪ್ರೇಕ್ಷಕರಿಂದ ತುಂಬಿತುಳುಕುತ್ತಿದ್ದವು. ಆದರೆ ಇಂದು ಪ್ರೇಕ್ಷಕ ವರ್ಗದ ಸಂಖ್ಯೆ ಕಡಿಮೆಯಾಗಿರುವುದು ಬೇಸರದ ಸಂಗತಿಯಾಗಿದೆ. ಯಕ್ಷಗಾನಕ್ಕೆ ದೊಡ್ಡ ಕೊಡುಗೆ ನೀಡಿರುವ ಕುಂದಾಪುರದ ಪ್ರೇಕ್ಷಕರು ಯಕ್ಷಗಾನ ಕಲೆಗೆ ನಿರಂತರ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಹಟ್ಟಿಯಂಗಡಿ ಮೇಳದ ಯಜಮಾನ ರಂಜಿತ್ ಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಕುಂದಾಪುರದಲ್ಲಿ ಜನಿಸಿ, ಯಕ್ಷಗಾನ, ಜಾನಪದ, ಉದ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಡಾ.ತಲ್ಲೂರು ಅವರನ್ನು ಮೇಳದ ಪರವಾಗಿ ಗೌರವಿಸಲು ಹೆಮ್ಮೆಯಾಗುತ್ತದೆ. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಸಿದ್ಧ ಕಲಾವಿದರ ಹೆಸರಿನಲ್ಲಿ ಯಕ್ಷಗಾನ ಪಂಚಮಿ, ಅಷ್ಟಾಹ ಮೊದಲಾದ ಕಾರ್ಯಕ್ರಮಗಳಿಗೆ ಡಾ.ತಲ್ಲೂರು ಕಾರಣೀಕರ್ತರು. ಮಳೆಗಾಲದಲ್ಲಿ ಟೆಂಟ್ ಆಟಗಳು ನಡೆಯದೆ ನಿರುದ್ಯೋಗಿಗಳಾಗುವ ಯಕ್ಷಗಾನ ಕಲಾವಿದರಿಗೆ ಒಂದಷ್ಟು ಉದ್ಯೋಗಾವಕಾಶಗಳು ಸಿಗಬೇಕು. ಹೊಸ ಪ್ರಸಂಗಗಳ ಪ್ರದರ್ಶನಗಳು, ಅವುಗಳ ಬಗ್ಗೆ ವಿಮರ್ಶೆಗಳು ನಡೆಯಬೇಕು ಎನ್ನುವ ಉದ್ದೇಶದಿಂದ ಮಳೆಗಾಲದಲ್ಲಿ ಇಂತಹ ಯಕ್ಸೊತ್ಸವಗಳನ್ನು ಅಲ್ಲಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ. ಪ್ರಸ್ತುತ ಯಕ್ಷಗಾನಕ್ಕೆ ವೈದ್ಯರು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ ಎಲ್ಲಾ ಸ್ತರದ ಕಲಾಸಕ್ತರು ಕಲಾವಿದರಾಗಿ ಬರುತ್ತಿರುವುದು ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಹಟ್ಟಿಯಂಗಡಿ ಮೇಳದ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಾ ಪ್ರೋತ್ಸಾಹಕ ದಿನಕರ ಶೆಟ್ಟಿ, ವಾಪಿ ಕನ್ನಡ ಸಂಘದ ಅಧ್ಯಕ್ಷೆ ನಿಶಾ ಶೆಟ್ಟಿ, ಸಂಗೀತಗಾರ ಲಕ್ಷ್ಮಿನಾರಾಯಣ ಉಪಾಧ್ಯಾಯ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಉಪಸ್ಥಿತರಿದ್ದರು. ರಾಜೇಶ್ ಶೆಟ್ಟಿ ವಕ್ವಾಡಿ ಪರಿಚಯಿಸಿದರು.

ಈ ಸಂದರ್ಭದಲ್ಲಿ ಹಟ್ಟಿಯಂಗಡಿ ಮೇಳದ ನೂತನ ಪ್ರಸಂಗವಾದ ‘ಕಾರಣಿಕದ ದೈವ ವೀರ ಕಲ್ಕುಡ’ ಎಂಬ ಯಕ್ಷಗಾನದ ಪ್ರದರ್ಶನ ನಡೆಯಿತು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ