ಕುಂದಾಪುರ : ಸ್ಥಳೀಯ ಖಾರ್ವಿ ಮೇಲ್ಕೇರಿಯಲ್ಲಿಂದು ಅಕ್ರಮ ಶೆಡ್ ಎಂದು ಆರೋಪಿಸಿ ಅದನ್ನು ಕೆಡವಲು ಪೊಲೀಸ್ ಪಡೆ ಸಹಿತ ಜೆಸಿಬಿ, ಲಾರಿ, ಹಾರೆ ಗುದ್ದಲಿ, ಕಾರ್ಮಿಕರೊಂದಿಗೆ ಸಜ್ಜಾಗಿ ಬಂದ ಅಧಿಕಾರಿಗಳು ಸ್ಥಳೀಯ ಮಹಿಳೆಯರು ಹಾಗೂ ಸಮಾಜ ಮುಖಂಡರ ಪ್ರತಿಭಟನೆಗೆ ಮಣಿದು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಿ ಹೋದ ಘಟನೆ ನಡೆದಿದೆ.
ಮೇಲ್ಕೇರಿಯಲ್ಲಿ ಈ ಶೆಡ್ ಇರುವ ಜಾಗದಲ್ಲಿ ಅನಾದಿ ಕಾಲದಿಂದಲೂ ಒಂದು ಗೂಡಂಗಡಿ ಇದ್ದು ಕಾಲಕ್ರಮೇಣ ಅದು ಮುಚ್ಚಲ್ಪಟ್ಟಿತು. ಮುಂದೆ ಅದೇ ಜಾಗದಲ್ಲಿ ಯಾರಿಗೂ ತೊಂದರೆಯಾಗದೆ ಪರಿಸರದವರು ಸೇರಿ ಕಷ್ಟ ಸುಖ ವಿಚಾರಿಸಿಕೊಳ್ಳುವ ಸಣ್ಣ ಪಂಚಾಯಿತಿ ಕಟ್ಟೆಯಾಗಿ ಮಾರ್ಪಟ್ಟಿತು. ಹೆಚ್ಚಾಗಿ ಮಹಿಳಾ ಸಂಘಗಳ ಸದಸ್ಯರೇ ಇಲ್ಲಿ ಸೇರುತ್ತಿದ್ದರಿಂದ ಮಳೆ ಬಿಸಿಲಿನಿಂದ ಪಾರಾಗಲು ಇದನ್ನು ಉಪಯೋಗಿಸಲಾಗುತ್ತಿತ್ತು. ಬಾಗಿಲು ಕಿಟಕಿ ಅಥವಾ ಯಾವುದೇ ಕೋಣೆಯಾಗಲಿ ಆಕ್ರಮ ವಿದ್ಯುತ್ ಸಂಪರ್ಕವಾಗಲಿ, ಆಳವಡಿಸದೆ ನೆತ್ತಿಯ ಮೇಲೆ ಒಂದೆರಡು ತಗಡುಗಳನ್ನು ಹಾಸಿದ ಪುಟ್ಟ ಶೆಡ್ಡನ್ನು ಇಲ್ಲಿ ನಿರ್ಮಿಸಿಕೊಂಡಿದ್ದರು. ಸಾರ್ವಜನಿಕರ ಪಾಲಿಗೂ ಇದೊಂದು ತಂಗುದಾಣದಂತಿದ್ದು ಯಾರಿಗೂ ತೊಂದರೆಯಂತಿರಲಿಲ್ಲ. ಆದರೆ ಪುರಸಭೆಯ ಅಧಿಕಾರಿಗಳು ಏಕಾಏಕಿ ಕೆಲವರ ಚಿತಾವಣೆಯಿಂದಾಗಿ ಇದೊಂದು ಬೃಹತ್ ಅಕ್ರಮ ಕಟ್ಟಡ ಎಂಬ ನೆಲೆಯಲ್ಲಿ ಕಾನೂನು ಬಳಸಿಕೊಂಡು ಧ್ವಂಸಕ್ಕೆ ಮುಂದಾಗಿರುವುದು ವಿಷಾದಕರ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.