ಬಹುನಿರೀಕ್ಷಿತ ಮಂಗಳೂರಿನ ಗುರುಪುರ-ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್‌ ಮೆಟ್ರೋ : ಜಲಸಾರಿಗೆ ಮಂಡಳಿ ಅನುಮೋದನೆ

ಬೆಂಗಳೂರು : ಬಹುನಿರೀಕ್ಷಿತ ಮಂಗಳೂರಿನ ಗುರುಪುರ-ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್‌ ಮೆಟ್ರೋ ಯೋಜನೆ ಕಾರ್ಯಗತಗೊಳಿಸಲು ಬುಧವಾರ ಕರ್ನಾಟಕ ಜಲಸಾರಿಗೆ ಮಂಡಳಿ ಅನುಮೋದನೆ ನೀಡಿತು.

ಸಿಎಂ ಅಧಿಕೃತ ನಿವಾಸ “ಕಾವೇರಿ”ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಒಳನಾಡು ಮತ್ತು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಭಾಗವಹಿಸಿದ್ದರು. ಸಭೆಯಲ್ಲಿ ಮಂಗಳೂರು ವಾಟರ್‌ ಮೆಟ್ರೋ ಯೋಜನೆ ಸಂಬಂಧ ಪ್ರಸ್ತಾವನೆ ಮಂಡಿಸಲಾಯಿತು. ಈ ಕುರಿತು ಚರ್ಚಿಸಿ, ಯೋಜನೆ ಕಾರ್ಯಗತಗೊಳಿಸಲು ಅನುಮೋದನೆ ನೀಡಲಾಯಿತು.

ಕೊಚ್ಚಿ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೊದಲ ವಾಟರ್‌ ಮೆಟ್ರೋ ಯೋಜನೆಯು ಕೂಳೂರು ಸೇತುವೆ, ಹೊಸ ಮಂಗಳೂರು ಬಂದರು, ಸುಲ್ತಾನ್‌ ಬತ್ತೇರಿ, ತಣ್ಣೀರುಬಾವಿ, ಹಳೆಯ ಬಂದರು ಸಹಿತ ಸುಮಾರು 17 ಪಾಯಿಂಟ್‌ಗಳ ಮೂಲಕ ಹಾದುಹೋಗಲಿದ್ದು, ಬಜಾಲ್‌-ಮರವೂರು ಬ್ರಿಡ್ಜ್ ನಡುವೆ ಒಟ್ಟಾರೆ 30 ಕಿ.ಮೀ. ಉದ್ದದ ಮಾರ್ಗ ಇದಾಗಿರಲಿದೆ.

ಇದಲ್ಲದೆ, ರಾಜ್ಯದ ಬಂದರುಗಳು ಅಭಿವೃದ್ಧಿ, ಜಲಸಾರಿಗೆ ಯೋಜನೆಗಳ ಪ್ರಗತಿ, ಸರಕು ಸಾಗಣೆಗೆ ಅವಶ್ಯವಿರುವ ಮೂಲ ಸೌಲಭ್ಯಗಳ ಬಗ್ಗೆ ಸಮಿತಿಯಲ್ಲಿ ಚರ್ಚಿಸಲಾಯಿತು. ಈ ವೇಳೆ ಸಾಗರಮಾಲಾ ಯೋಜನೆಯಡಿ ಮಂಗಳೂರಿನಲ್ಲಿ ಕರ್ನಾಟಕ ಜಲಸಾರಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದರು.

ಇದರ ಜತೆಗೆ ಪುನರ್‌ವಸತಿ, ಬಂದರು ಸಂಬಂಧಿತ ಕಾರ್ಯಾಚರಣೆಗಳಿಗೆ ಭೂಮಿ ಹಂಚಿಕೆ ಗುತ್ತಿಗೆ ಅವಧಿಯನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಅತಿಕ್ರಮಣ ಮಾಡಿಕೊಂಡಿರುವವರನ್ನು ಕೂಡಲೇ ಎತ್ತಂಗಡಿ ಮಾಡುವಂತೆ ಸೂಚನೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುತಿಸಲಾಗಿರುವ ದ್ವೀಪಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿ ಡ್ರೋನ್‌ ಸರ್ವೇ ಮಾಡಿಸಿ ಮುಂದಿನ ಮೂರು ತಿಂಗಳ ಒಳಗೆ ವರದಿ ನೀಡುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಇದೇ ವೇಳೆ ಸೂಚಿಸಿದರು.

ಅಲ್ಲದೆ ಆಂಧ್ರಪ್ರದೇಶ, ವಿಶಾಖಪಟ್ಟಣ, ಕೇರಳ, ತಮಿಳುನಾಡು, ಗುಜರಾತ್‌ಗಳಲ್ಲಿ ಬಂದರುಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಿಎಂ, ಮುಂದಿನ ದಿನಗಳಲ್ಲಿ ರಾಜ್ಯದ ಬಂದರು ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ, ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.

Related posts

ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಸಂಘಟಿತವಾಗಿ ಸರಕಾರಿ ಶಾಲೆಗಳನ್ನು ಉಳಿಸೋಣ – ಶಾಸಕ ಗಂಟಿಹೊಳೆ ಕರೆ

ಭಾರತ ಸರ್ಕಾರ ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಿದೆ – ಸುನಿಲ್ ಕುಮಾರ್