ಉಡುಪಿ : ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಕಿನ್ನಿಮೂಲ್ಕಿಯ ಎಫ್ಇಎ ರೋಡ್ರಿಗಸ್ ವಂಚನೆಗೆ ಒಳಗಾದವರು. ಇವರ ಮೊಬೈಲ್ ಸಂಖ್ಯೆಯನ್ನು ಅಪರಿಚಿತ ವ್ಯಕ್ತಿ Fortum Paradise Group ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಗೊಳಿಸಿದ್ದರು.
ಈ ಗ್ರೂಪ್‌ನಲ್ಲಿ ಶೇರು ಮಾರುಕಟ್ಟೆ, ಕ್ರಿಪ್ಟೋ ಕರೆನ್ಸಿ ಹೂಡಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದು ಅನಂತರದಲ್ಲಿ ಕ್ರಿಪ್ಟೋ ಕರೆನ್ಸಿಯ ಹೂಡಿಕೆಯಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿದ್ದರು. ಇದನ್ನು ನಂಬಿದ ಅವರು ತಾನು ಈ ಮೊದಲು ಹೂಡಿಕೆ ಮಾಡಿದ್ದ ಶೇರುಗಳನ್ನು ಮಾರಾಟ ಮಾಡಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರು. ಅದರಲ್ಲಿ ಬಂದ ಹಣದಲ್ಲಿ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ ಒಟ್ಟು 67,16,000 ರೂ.ಗಳನ್ನು ಆನ್‌ಲೈನ್ ಮೂಲಕ ನೀಡಿದ್ದು, ಆರೋಪಿಗಳು ಹಣ ಅಥವಾ ಲಾಭಾಂಶ ನೀಡದೆ ವಂಚಿಸಿದ್ದಾಗಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.