ವೇತನ ಹೆಚ್ಚಳ, ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆ – ಗ್ರಾಮ ಆಡಳಿತಾಧಿಕಾರಿಗಳ ಮುಂದುವರಿದ ಅನಿರ್ಧಿಷ್ಟಾವಧಿ ಧರಣಿ

ಕಾರ್ಕಳ : ವೇತನ ಹೆಚ್ಚಳ, ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆ ಸೇರಿದಂತೆ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಫೆ 10ರಿಂದ ಗ್ರಾಮ ಆಡಳಿತಾಧಿಕಾರಿಗಳು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇವರ ರಾಜ್ಯವ್ಯಾಪಿ ಮುಷ್ಕರ ಇದೀಗ ಶುಕ್ರವಾರಕ್ಕೆ 5ನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೂ ಸರ್ಕಾರ ಮಾತ್ರ ಇವರ ಬೇಡಿಕೆಗಳಿಗೆ ಸ್ಪಂದಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಿಂದ ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಗ್ರಾಮ ಕರಣಿಕರ ಕಚೇರಿಗಳು ಶಿಥಿಲಾವಸ್ಥೆಯಿಲ್ಲಿದ್ದು, ಹೊಸ ಅಥವಾ ನವೀಕೃತ ಕಟ್ಟಡ, ಗುಣಮಟ್ಟದ ಪೀಠೋಪಕರಣಗಳು, ದಾಖಲೆಗಳ ಅಪ್‌ಲೋಡ್ ಗಳಿಗೆ ಗುಣಮಟ್ಟದ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಪ್ರಿಂಟರ್ ಹಾಗೂ ಸ್ಕಾö್ಯನರ್ ಪೂರೈಸುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇದಲ್ಲದೇ ಕಂದಾಯ ಇಲಾಖೆಯ ಒಟ್ಟು 21 ಮೊಬೈಲ್ ತಂತ್ರಾoಶಗಳ ನಿರ್ವಹಣೆಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನವನ್ನು ಗ್ರಾಮ ಆಡಳಿತಾಧಿಕಾರಿಗಳಿಗೆ ನಿಗದಿಪಡಿಸಬೇಕು. ನೌಕರರಿಗೆ ಅಂತರ್ ಜಿಲ್ಲಾ ವರ್ಗಾವಣೆ ಅಥವಾ ಇತರೇ ಇಲಾಖೆಗಳಂತೆ ವರ್ಗಾವಣೆಗೆ ವಿಶೇಷ ಮಾರ್ಗಸೂಚಿ ರಚಿಸಬೇಕು. ಗ್ರಾಮ ಆಡಿತಾಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ನೀಡುವಂತೆ ಮನವಿಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಗಿದೆ. ಇದಲ್ಲದೇ ಚುನಾವಣೆ, ಅತಿವೃಷ್ಟಿ, ಅನಾವೃಷ್ಟಿ ಸಂದರ್ಭಗಳಲ್ಲಿ ಹಾಗೂ ಸಾರ್ವಜನಿಕ ಸೇವೆಗಳನ್ನು ನೀಡುವ ಸಂದರ್ಭದಲ್ಲಿ ದೈಹಿಕ ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಿದ್ದು, ಆದ್ದರಿಂದ 3 ಸಾವಿರ ರೂ ಆಪತ್ತಿನ ಭತ್ಯೆ ನೀಡುವಂತೆ ಆಗ್ರಹಿಸಿದ್ದಾರೆ.

ಇನ್ನುಳಿದಂತೆ ಪೊಲೀಸ್ ಇಲಾಖೆಯಲ್ಲಿ ನೀಡುತ್ತಿರುವ ಒಂದು ತಿಂಗಳ ಹೆಚ್ಚುವರಿ ವೇತನ ಹಾಗೂ ಹಾಲಿ ಪ್ರಯಾಣ ಭತ್ಯೆ 500 ರೂಪಾಯಿಯನ್ನು 5 ಸಾವಿರಕ್ಕೆ ಏರಿಸುವಂತೆ, ವಂಶವೃಕ್ಷ, ಜಾತಿ ಪ್ರಮಾಣ ಪತ್ರಗಳ ವಿತರಣೆ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿದ ಅರ್ಜಿದಾರರ ಬದಲಿಗೆ ಗ್ರಾಮ ಆಡಳಿತಾಧಿಕಾರಿಗಳ ಮೇಲೆ ಎಫ್.ಐ.ಆರ್. ದಾಖಲಿಸುತ್ತಿದ್ದು ಇದರ ಬದಲಿಗೆ ಅರ್ಜಿದರರನ್ನೇ ಹೊಣೆಗಾರರಾಗಿಸಬೇಕು. ಬೆಳೆ ಸಮೀಕ್ಷೆ, ಬೆಳೆ ಪರಿಹಾರದ ಕೆಲಸವನ್ನು ಕೃಷಿ ಅಥವಾ ತೋಟಗಾರಿಕೆಗೆ ವಹಿಸುವಂತೆ ನಿರ್ದೇಶಿಸಬೇಕು, ಮ್ಯುಟೇಶನ್ ಅವಧಿ ವಿಸ್ತರಣೆ, ಪ್ರೊಟೊಕಾಲ್ ಕೆಲಸದಿಂದ ವಿನಾಯಿತಿ ಹಾಗೂ ದಫ್ತರ್ ಮತ್ತು ಜಮಾಬಂದಿಯನ್ನು ರದ್ದುಪಡಿಸಬೇಕು ಮಾತ್ರವಲ್ಲದೇ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸುವ ಬೇಡಿಕೆಯನ್ನು ಈಡೇರಿಸಬೇಕೆಂದು ಒಟ್ಟು 23 ಅಂಶಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಗಾಮ ಆಡಳಿತಾಧಿಕಾರಿಗಳ ಈ ಪ್ರತಿಭಟನೆಗೆ ಉನ್ನತ ಅಧಿಕಾರಿಗಳು ಸೊಪ್ಪು ಹಾಕಿಲ್ಲವಾದರೂ ರಾಜಕೀಯ ಪಕ್ಷಗಳ ಮುಖಂಡರು ಧರಣಿನಿರತರಿಂದ ಮನವಿ ಪಡೆದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Related posts

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ

ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ