ಉಡುಪಿ : ಕಾರ್ಕಳದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ನಡೆಯುತ್ತಿದೆ. ಈ ಇಡೀ ಪ್ರಕರಣದ ಹಿಂದೆ ಇರುವ ಡ್ರಗ್ಸ್ ದಂಧೆಯ ಕರಾಳ ಮುಖ ಒಂದೊಂದೇ ಬಯಲಾಗುತ್ತಿದೆ. ಆರೋಪಿಗಳ ಲಿಂಕ್ ಬೆಂಗಳೂರು ಮತ್ತು ತಿರುಪತಿವರೆಗೆ ಚಾಚಿದ್ದು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಯುವತಿಯ ಅತ್ಯಾಚಾರ ಪ್ರಕರಣ ಒಂದು ಭಾಗವಾದರೆ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಲಾಗಿದ್ದು ಈ ಪ್ರಕರಣದ ತನಿಖೆ ಪೊಲೀಸರಿಗೂ ಒಂದು ಸವಾಲಾಗಿ ಪರಿಣಮಿಸಿದೆ. ಪ್ರಮುಖ ಆರೋಪಿ ಅಲ್ತಾಫ್ ಅತ್ಯಾಚಾರ ಎಸಗಿದ್ದರೆ ಅಭಯ್ ಎಂಬಾತ ಕೃತ್ಯ ನಡೆದ ಸ್ಥಳಕ್ಕೆ ಡ್ರಗ್ಸ್ ತಂದು ಕೊಟ್ಟಿದ್ದ. ಡ್ರಗ್ಸ್ ತಂದು ಕೊಟ್ಟವರಿಗೆ ತಿರುಪತಿ, ಬೆಂಗಳೂರು ತನಕ ಸಂಪರ್ಕ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಿಂದೂ ಯುವತಿಯನ್ನು ಆಗಸ್ಟ್ 24ರಂದು ಅಪಹರಿಸಿ ಕೌಡೂರು ಬಳಿಯ ರಂಗನಪಲ್ಕೆಯ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅಲ್ತಾಫ್, ರಿಚರ್ಡ್ ಕ್ವಾಡ್ರಸ್ ಹಾಗೂ ಅಭಯ್ ಎಂಬ ಮೂವರನ್ನು ಬಂಧಿಸಲಾಗಿದೆ. ಜತೆಗೆ ಮತ್ತಿಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ಈ ತನಕ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್ಪಿ ಮಾಹಿತಿ ನೀಡಿದ್ದಾರೆ.
ಇನ್ನು ಯುವತಿಗೆ ನೀಡಲಾದ ಡ್ರಗ್ಸ್ ಮೂಲದ ಬಗ್ಗೆ ತನಿಖೆ ನಡೆದಿದ್ದು ಅದು ಎಂಡಿಎಂಎ ಎಂಬುದು ಗೊತ್ತಾಗಿದೆ. ಇದನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಡ್ರಗ್ಸ್ ಬೆಂಗಳೂರು, ತಿರುಪತಿಯಿಂದ ಸರಬರಾಜು ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅಭಯ್ ಹಾಗೂ ಇನ್ನಿಬ್ಬರು ಶಂಕಿತರನ್ನು ಪೊಲೀಸರು ಬೆಂಗಳೂರು ಹಾಗೂ ತಿರುಪತಿಗೆ ಪೊಲೀಸರು ಕರೆದೊಯ್ದಿದ್ದಾರೆ. ಜೊತೆಗೆ ಬೆಂಗಳೂರು ಸಿಸಿಬಿ ಪೊಲೀಸರ ಸಹಕಾರವನ್ನೂ ಪಡೆಯಲಾಗಿದೆ.
ಇತ್ತೀಚಿಗೆ ನಡೆದ ಘಟನೆ ಹಿಂದೆ ಬೃಹತ್ ಡ್ರಗ್ಸ್ ಮಾಫಿಯ ಇರುವುದು ತನಿಖೆಯಿಂದ ಪತ್ತೆಯಾಗಿದೆ. ಡ್ರಗ್ಸ್ ಜಾಲದ ಡ್ರಗ್ ಪೆಡ್ಲರ್ ಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.